ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಆತ್ಮಸಾಕ್ಷಿ ಮತಗಳು ದೊರೆಯಲಿವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ನಾವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಜೆಡಿಎಸ್‌ನಲ್ಲಿರುವ ಅಲ್ಪಸಂಖ್ಯಾತ ಶಾಸಕರು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಕೋಮುವಾದಿ ಬಿಜೆಪಿಯನ್ನು ದೂರ ಇಡುವುದಕ್ಕಾಗಿ ತಮ್ಮ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿಗೊಳಿಸಿ ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಬೆಂಬಲಿಸಲು ಜೆಡಿಎಸ್‌ನವರು ಮುಂದಾಗಬೇಕು. ಎಚ್.ಡಿ. ದೇವೇಗೌಡ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿಯನ್ನು ಹಾಕದೇ ಬೆಂಬಲ ನೀಡಿದ್ದೆವು. 37 ಸ್ಥಾನ ಗೆದ್ದಿದ್ದ ಜೆಡಿಎಸ್‌ಗೆ ನಾವು ಮುಖ್ಯಮಂತ್ರಿ ಸ್ಥಾನ ನೀಡಿದ್ದೆವು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಈಗ ಜೆಡಿಎಸ್‌ನವರು ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲಿಸಲಿ ಎಂದರು.
ಕೋಮುವಾದಿ ಅಭ್ಯರ್ಥಿ ಗೆಲ್ಲದಿರಲೆಂದು ಜೆಡಿಎಸ್‌ನವರು ನಮ್ಮ ಅಭ್ಯರ್ಥಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್‌ನ ಹೇಳಿದಂತೆ ಕೇಳುವ ರಾಜ್ಯ ಘಟಕದ ಅಧ್ಯಕ್ಷ ಆಗಿದ್ದಾರೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅವರಿಗೆ ಮಾನ- ಮರ್ಯಾದೆ ಇಲ್ಲ. ಕಾಂಗ್ರೆಸ್ ತೊರೆದು ಹೋದ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಜೆಡಿಎಸ್‌ನವರು ಮಾಡಿದರಾ? ಎಂದು ಟೀಕಿಸಿದರು.
ಕಾಂಗ್ರೆಸ್‌ನವರ ಟಾರ್ಚರ್ ತಡೆಯಲಾಗದೆ, ಸರ್ಕಾರ ಬಿದ್ದು ಹೋಗಲೆಂದೇ ವಿದೇಶಕ್ಕೆ ಹೋಗಿದ್ದೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆಗ ಸಿದ್ದರಾಮಯ್ಯ ಅವರೇ ಸರ್ಕಾರ ಬೀಳಿಸಿದರು ಎಂದು ಹೇಳಿದ್ದರು. ಈಗ ಟಾರ್ಚರ್ ತಡೆಯಲಾಗದೆ ವಿದೇಶಕ್ಕೆ ಹೋಗಿದ್ದೆ ಎಂದಿದ್ದಾರೆ. ಸರ್ಕಾರ ಬಿದ್ದಾಗಲೇ ಅದನ್ನು ಹೇಳಲಿಲ್ಲವೇಕೆ? ಅವರು ಆಗ ಹೇಳಿದ್ದು ಸತ್ಯವೋ? ಈಗ ಹೇಳಿರುವುದೋ? ಅಧಿವೇಶನದಲ್ಲಿ ಉತ್ತರ ಕೊಟ್ಟಾಗ ಹೇಳಿರುವ ಮಾತುಗಳೇ ಬೇರೆ. ಅದೆಲ್ಲವೂ ದಾಖಲಾಗಿದ್ದು, ಪರಿಶೀಲಿಸಬಹುದು. ಆಗ ಹೇಳಿದ್ದನ್ನು ನಂಬಬೇಕಾ ಅಥವಾ ಈಗ ಹೇಳಿದ್ದನ್ನು ನಂಬಬೇಕಾ? ಎಂದು ವ್ಯಂಗ್ಯವಾಡಿದರು.
ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವ ಪದವನ್ನೇ ಪಠ್ಯದಿಂದ ತೆಗೆದಿದ್ದಾರೆ. ಅವರು ಸಂವಿಧಾನ ಶಿಲ್ಪಿ ಅಲ್ಲವೇ ಎಂದು ಬಿಜೆಪಿಯವರು ಹೇಳಿಬಿಡಲಿ. ಬಿಜೆಪಿಯವರು ಅಂಬೇಡ್ಕರ್ ಅವರಿಗೆ ಬಹಳ ಅವಮಾನ ಮಾಡಿದ್ದಾರೆ. ಜೊತೆಗೆ ಕುವೆಂಪು, ಬಸವಣ್ಣ, ನಾರಾಯಣಗುರು, ಭಗತ್ ಸಿಂಗ್ ಅವರಿಗೂ ಅವಮಾನ ಮಾಡಿದ್ದಾರೆ. ದಲಿತರ ಬಗ್ಗೆ ಕಾಳಜಿ ವಹಿಸುವ ಕುರಿತು ನಮಗೆ ಹೇಳಿಕೊಡಬೇಕಿಲ್ಲ. ಸಂವಿಧಾನ ಜಾರಿಯ ಬಗ್ಗೆ ಬದ್ಧತೆಯುಳ್ಳ ಪಕ್ಷ ನಮ್ಮದು. ಗುತ್ತಿಗೆ, ಬಡ್ತಿಯಲ್ಲಿ ಮೀಸಲಾತಿ ನೀಡಿದವರು ನಾವು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟವರು ನಾವು ಎಂದು ತಿರುಗೇಟು ನೀಡಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ವಿಸರ್ಜಿಸುವುದಲ್ಲ. ಅವರು ಮಾಡಿದ್ದ ಇಡೀ ಪಠ್ಯಕ್ರಮವನ್ನು ತಿರಸ್ಕರಿಸಿ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ್ದ ಪಠ್ಯಪುಸ್ತಕಗಳನ್ನು ಕಲಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ನ್ಯಾಯಾಲಯದಲ್ಲಿ ವಕೀಲರಾಗಿದ್ದ ಸಿದ್ದರಾಮಯ್ಯ ಅರ್ಥಶಾಸ್ತ್ರಜ್ಞರಾ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೌದು ನಾನು ಅರ್ಥಶಾಸ್ತ್ರಜ್ಞ ಅಲ್ಲ. ನಾನೊಬ್ಬ ವಕೀಲ. ಅವರೇನು ವಕೀಲರಾ? ಅರ್ಥಶಾಸ್ತ್ರಜ್ಞರಾ? ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಆರ್ಥಿಕ ತಜ್ಞರಾ? ನಾನು ಹೇಳಿದ್ದನ್ನು ಸರಿ ಇಲ್ಲ ಎನ್ನುವುದು ಅವನಿಗೇನು ಗೊತ್ತಾಗುತ್ತದೆ. ಅವಮಾನ ಅರ್ಥಶಾಸ್ತ್ರಜ್ಞನಾ. ಮೈಸೂರಿಗೆ ಅವರ ಕೊಡುಗೆ ಏನು? ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾನೆ' ಎಂದು ತಿರುಗೇಟು ನೀಡಿದರು.
ಅವರಪ್ರಕಾರ ನಗರಕ್ಕೆ ನಿರ್ದಿಷ್ಟವಾದ ಕೊಡುಗೆ ನೀಡಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು.
ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಭವನ, ಜಯದೇವ ಅಸ್ಪತ್ರೆ, ಮಹಾರಾಣಿ ಕಾಲೇಜು, ಅಂಬೇಡ್ಕರ್ ಭವನ, ದಶಪಥ ರಸ್ತೆ ಮೊದಲಾದ ಕೆಲಸಗಳನ್ನು ನಾನು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದೇನೆ. ಅವರು ಯಾವುದಾದರೂ ಒಂದು ಮಾಡಿದ್ದಾರೆಯೇ? ನಾನು ಅವರೊಂದಿಗೆ ಬಹಿರಂಗ ಚರ್ಚೆಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರನ್ನು ಕಳುಹಿಸುತ್ತೇನೆ. ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ಕೇವಲ ಸುಳ್ಳು ಹೇಳುವುದರಲ್ಲೇ ಕಾಲ ಕಳೆಯುತ್ತಿರುವ ವ್ಯಕ್ತಿ ಅವರು ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.