ನವದೆಹಲಿ: ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗೆ ‘ಪ್ರಸಾದ’ ಯೋಜನೆಯಡಿ ₹ 83.52 ಕೋಟಿ ಮಂಜೂರು ಮಾಡಬೇಕು ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಜಗ್ಗೇಶ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಮೇಲ್ಮನೆಯಲ್ಲಿ ಶೂನ್ಯ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಅವರು, ಭೀಮಾ ನದಿ ದಡದಲ್ಲಿರುವ ಪ್ರಮುಖ ಯಾತ್ರಾಸ್ಥಳವಾಗಿರುವ ದೇವಾಲಯದ ಮಹತ್ವವನ್ನು ವಿವರಿಸಿದರು. ದೇಶದಾದ್ಯಂತದ ಭಕ್ತರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದರು.
ದೇವಸ್ಥಾನದ ಆವರಣ ತುಂಬಾ ಚಿಕ್ಕದಾಗಿದ್ದು, ಸುತ್ತಲೂ ಮನೆ, ಅಂಗಡಿಗಳಿದ್ದು, ಹೆಚ್ಚುತ್ತಿರುವ ಯಾತ್ರಾರ್ಥಿಗಳ ನಿರ್ವಹಣೆ ಹಾಗೂ ಸೂಕ್ತ ಸೌಲಭ್ಯ ಕಲ್ಪಿಸುವುದು ಕಷ್ಟವಾಗುತ್ತಿದೆ ಎಂದು ಜಗ್ಗೇಶ್ ಹೇಳಿದರು.
ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ವಿಸ್ತರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿಗೆ ದತ್ತಾತ್ರೇಯ ಸಮಿತಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಅವರು ವಿನಂತಿಸಿದರು.
ಬಳಿಕ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.