ADVERTISEMENT

ಸಿಗದ ರಾಜ್ಯೋತ್ಸವ ಗೌರವ: ಪ್ರಶಸ್ತಿಗೂ ಚುನಾವಣೆ ಅಡ್ಡಗಾಲು

ಸರ್ಕಾರದ ಕ್ರಮಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 19:32 IST
Last Updated 31 ಅಕ್ಟೋಬರ್ 2018, 19:32 IST
   

ಬೆಂಗಳೂರು: ಪ್ರತಿ ವರ್ಷ ನವೆಂಬರ್‌ 1ರಂದು ನೀಡಲಾಗುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ಉಪ ಚುನಾವಣೆಯ ನೀತಿ ಸಂಹಿತೆ ಅಡ್ಡಗಾಲು ಹಾಕಿದೆ.

ಚುನಾವಣೆ ನಡೆಯಲಿದೆ ಎಂದು ಗೊತ್ತಿದ್ದರೂ, ಮೊದಲೇ ಈ ನಿರ್ಧಾರಕ್ಕೆ ಬರದೇ ಕೊನೆಗಳಿಗೆಯಲ್ಲಿ ಪ್ರಶಸ್ತಿ ಘೋಷಣೆ ಹಾಗೂ ಪ್ರದಾನ ಸಮಾರಂಭ ಮುಂದೂಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ಷೇಪ–ಅಸಮಾಧಾನ ವ್ಯಕ್ತವಾಗಿವೆ.

ಪ್ರಶಸ್ತಿ ಘೋಷಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ರಾಜ್ಯ ಸರ್ಕಾರ ಯಾವುದೇ ಅಭಿಪ್ರಾಯ ಪಡೆದಿಲ್ಲ. ಅಧಿಕಾರಿಗಳ ಮಾತಿಗೆ ಮಣಿದು ದಿಢೀರ್‌ ಈ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ನಡೆದಿದೆ.

ADVERTISEMENT

ಪ್ರಶಸ್ತಿ ಆಯ್ಕೆ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಭೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ವಿವಿಧ ಅಕಾಡೆಮಿಗಳ ಅಧ್ಯಕ್ಷರು ಮತ್ತು ಆಯ್ಕೆ ಸಮಿತಿ ಸದಸ್ಯರು ಸಭೆಯಲ್ಲಿದ್ದರು.

‘ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಏಳು ಜಿಲ್ಲೆಗಳಿಂದ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಗೋಪ್ಯವಾಗಿಟ್ಟು ಉಳಿದವರ ಹೆಸರು ಪ್ರಕಟಿಸಲು ಮುಖ್ಯಮಂತ್ರಿ ಆಸಕ್ತಿ ತೋರಿಸಿದರು. ಪಟ್ಟಿ ಬಹಿರಂಗಗೊಳ್ಳುವ ಬಗ್ಗೆ ಸಭೆಯಲ್ಲಿದ್ದ ಕೆಲವರು ಆತಂಕ ವ್ಯಕ್ತಪಡಿಸಿದರು’ ಎಂದು ಗೊತ್ತಾಗಿದೆ.

ಉಪ ಚುನಾವಣೆ ನಡೆಯುವ ಕ್ಷೇತ್ರಗಳಿರುವ ಜಿಲ್ಲೆಗಳ ಪ್ರಶಸ್ತಿ ಪುರಸ್ಕೃತರು ಆಯ್ಕೆ ಪಟ್ಟಿಯಲ್ಲಿದ್ದರೆ ಪ್ರಕಟಿಸಲು ನೀತಿಸಂಹಿತೆ ಅಡ್ಡಿಯಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರ ಸಲಹೆಯನ್ನು ಹಿರಿಯ ಅಧಿಕಾರಿಗಳು ಸಭೆಗೆ ವಿವರಿಸಿದರು.

‘ಉಪ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಳ್ಳುವ ನ. 8ರವರೆಗೆ ಯಾವುದೇ ತೀರ್ಮಾನ ಮಾಡುವುದು ಬೇಡ. ಆಯ್ಕೆ ಸಮಿತಿ ಈಗ ಸಿದ್ಧಪಡಿಸಿರುವ ಪಟ್ಟಿಯನ್ನು ಮರು ಪರಿಶೀಲಿಸಬೇಕು. ಅದನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿಯ ಮುಂದಿಟ್ಟು ಅಂತಿಮ ಆಯ್ಕೆ ಮಾಡಬೇಕು. ಅದಾದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಗೊತ್ತು ಮಾಡಲು ಸಭೆ ನಿರ್ಧರಿಸಿತು’ ಎಂದೂ ಮೂಲಗಳು ತಿಳಿಸಿವೆ.

ನವೆಂಬರ್ 1ರಂದೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸರ್ಕಾರವೂ ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಈ ಸಂಪ್ರದಾಯಕ್ಕೆ ತೆರೆ ಬಿದ್ದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

* ಕನ್ನಡ ರಾಜ್ಯೋತ್ಸವ ಆಚರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ಕೇಳಿಲ್ಲ

-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ

*ಪ್ರತಿ ವರ್ಷದ ಪದ್ಧತಿಯಂತೆ ನ. 1ರಂದೇ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಗುತ್ತಿತ್ತು. ಈ ಬಾರಿ ಅದನ್ನು ಮುಂದೂಡಿರುವುದು ನಿರಾಸೆ ಮೂಡಿಸಿದೆ

-ನಿಸಾರ್‌ ಅಹಮದ್‌, ಕವಿ

* ನಾಲ್ಕೈದು ವರ್ಷಗಳಿಂದ ಪಾರದರ್ಶಕವಾಗಿ ಆಯ್ಕೆ ನಡೆಯುತ್ತಿತ್ತು. ಇದಕ್ಕೂ ನೀತಿ ಸಂಹಿತೆಯ ನಿಯಮಾವಳಿ ಅನ್ವಯಿಸಬಾರದಿತ್ತು
- ಬಿ.ಶಶಿಧರ ಅಡಪ, ರಂಗಕರ್ಮಿ

* ಪ್ರಶಸ್ತಿ ಪ್ರದಾನ ಮುಂದೂಡಿಕೆ ಒಳ್ಳೆಯದು. ನವೆಂಬರ್‌ ರಾಜ್ಯೋತ್ಸವದ ಮಾಸವಾಗಿರುವ ಕಾರಣ ಈ ತಿಂಗಳಿನಲ್ಲಿ ಯಾವಾಗ ಪ್ರಶಸ್ತಿ ನೀಡಿದರೂ ಪ್ರಾಮುಖ್ಯತೆ ಇದೆ
- ಡಾ. ಚೆನ್ನವೀರ ಕಣವಿ, ಹಿರಿಯ ಸಾಹಿತಿ

* ರಾಜ್ಯೋತ್ಸವದ ದಿನವೇ ಪ್ರಶಸ್ತಿ ನೀಡಿದ್ದರೆ ಉತ್ತಮ ಇರುತ್ತಿತ್ತು. ಆದರೆ ಉಪ ಚುನಾವಣೆ ಇರುವುದರಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು
-ಡಾ.ಮಾಲತಿ ಪಟ್ಟಣಶೆಟ್ಟಿ‌, ಸಾಹಿತಿ

* ನೀತಿಸಂಹಿತೆ ಜಾರಿ ಇರುವುದರಿಂದ ಪ್ರಶಸ್ತಿ ಕೊಡುವುದನ್ನು ಮುಂದೂಡಿದ್ದಾರೆ. ಚುನಾವಣೆಗಳಿದ್ದರೆ ಮುಂದೂಡುವುದು ಸಾಮಾನ್ಯ.
-ಕುಂ.ವೀರಭದ್ರಪ್ಪ, ಸಾಹಿತಿ

* ರಾಜ್ಯೋತ್ಸವ ದಿನದಂದು ಪ್ರಶಸ್ತಿ ನೀಡುವ ಪರಂಪರೆ ಉಲ್ಲಂಘಿಸಿದರೆ ಕನ್ನಡದ ಅಸ್ಮಿತೆಗೆ ದ್ರೋಹ ಮಾಡಿದಂತೆ. ಮುಖ್ಯಮಂತ್ರಿಗೆ ಸಮಯದ ಅಭಾವ ಇರಬಹುದು
- ಅಲ್ಲಮಪ್ರಭು ಬೆಟ್ಟದೂರ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.