ADVERTISEMENT

ಬೆಳಗಾವಿಯಲ್ಲಿ ಕಲ್ಲು ತೂರಾಟ, ಕಪ್ಪು ಬಾವುಟ ಹಾರಾಟ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 12:17 IST
Last Updated 1 ನವೆಂಬರ್ 2018, 12:17 IST
ಬೆಳಗಾವಿಯಲ್ಲಿ ಗುರುವಾರ ಎಂಇಎಸ್‌ ಕರಾಳ ದಿನ ಮೆರವಣಿಗೆ ಹಮ್ಮಿಕೊಂಡಿತ್ತು
ಬೆಳಗಾವಿಯಲ್ಲಿ ಗುರುವಾರ ಎಂಇಎಸ್‌ ಕರಾಳ ದಿನ ಮೆರವಣಿಗೆ ಹಮ್ಮಿಕೊಂಡಿತ್ತು   

ಬೆಳಗಾವಿ: ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಗುರುವಾರ ಹಮ್ಮಿಕೊಂಡಿದ್ದ ಕರಾಳ ದಿನ ಮೆರವಣಿಗೆಯು ಬಸವೇಶ್ವರ ವೃತ್ತದ ಬಳಿ ಬಂದಾಗ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಸ್ಥಳದಲ್ಲಿಯೇ ಹಾಜರಿದ್ದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಚದುರಿಸಿದರು.

ಇಲ್ಲಿನ ಶಿವಾಜಿ ಉದ್ಯಾನದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಸವೇಶ್ವರ ವೃತ್ತದ ಬಳಿ ಬಂದಾಗ ಕೆಲವು ಕಿಡಿಗೇಡಿಗಳು, ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಪಟಾಕಿಗಳನ್ನು ಸಿಡಿಸಿದರು. ಕಲ್ಲು ತೂರಾಟ ನಡೆಸಿದರು. ಪೊಲೀಸರ ಎರಡು ಜೀಪ್‌ಗಳಿಗೆ ತಾಗಿದವು. ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಬೀಸಿ, ಚದುರಿಸಿದರು.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕ್ಷಣಾರ್ಧದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿತು. ನಂತರ ಮೆರವಣಿಗೆ ಮುಂದುವರಿಯಿತು. ಮರಾಠಾ ಮಂದಿರಕ್ಕೆ ಬಂದು, ಸಮಾಪ್ತಿಯಾಯಿತು.

ADVERTISEMENT

ಉಪಮೇಯರ್ ಭಾಗಿ:ಮಹಾನಗರ ಪಾಲಿಕೆಯ ಉಪಮೇಯರ್, ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಮಧುಶ್ರೀ ಪೂಜಾರಿ ಅವರು ಪಾಲಿಕೆಯಲ್ಲಿ ನಡೆದ ಕನ್ನಡಾಂಬೆ ಭುವನೇಶ್ವರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಎಂಇಎಸ್‌ ಆಯೋಜಿಸಿದ್ದ ಕರಾಳ ದಿನ ಮೆರವಣಿಗೆಯಲ್ಲಿಯೂ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

ಕನ್ನಡಿಗರಿಗೆ ತೊಂದರೆ– ಬೆದರಿಕೆ:ಮರಾಠಾ ಮಂದಿರದಲ್ಲಿ ಎಂಇಎಸ್‌ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿವಸೇನೆ ಘಟಕದ ಅಧ್ಯಕ್ಷ ವಿಜಯ ದೇವಡೆ ಮಾತನಾಡಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವುದು ನಮ್ಮ ಬೇಡಿಕೆ. ಗಡಿ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಮುತುವರ್ಜಿ ವಹಿಸಿ ಸಮರ್ಥ ವಾದ ಮಂಡಿಸಬೇಕು ಎಂದು ಒತ್ತಾಯಿಸಿದರು.

‘ಕರ್ನಾಟಕದಲ್ಲಿರುವ ಮರಾಠಿಗರಿಗೆ ತೊಂದರೆ ನೀಡಿದರೆ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ನಾವು ತೊಂದರೆ ಕೊಡಬೇಕಾಗುತ್ತದೆ. ಮರಾಠಿಗರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು‘ ಎಂದು ಒತ್ತಾಯಿಸಿದರು.
ಎಂಇಎಸ್ ಮುಖಂಡರಾದ ಮನೋಹರ ಕಿಣೇಕರ, ಪ್ರಕಾಶ ಮರಗಾಳೆ ಇದ್ದರು.

ಕಪ್ಪು ಬಟ್ಟೆ ಹಾರಾಟ:ಬೆಳಗಾವಿ ತಾಲ್ಲೂಕಿನ ಕೊಂಡಸಕೊಪ್ಪ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಧ್ವಜಸ್ತಂಭಕ್ಕೆ ಕಿಡಿಗೇಡಿಗಳು ಕಪ್ಪು ಬಟ್ಟೆ ಕಟ್ಟಿದ್ದು ಬೆಳಿಗ್ಗೆ ಬೆಳಕಿಗೆ ಬಂದಿತು. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಥಳೀಯ ಯುವಕರೊಬ್ಬರು ಧ್ವಜಸ್ತಂಭ ಏರಿ, ಕಪ್ಪು ಬಟ್ಟೆ ಬಿಚ್ಚಿದರು.

ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಠಿ:ಇದೇ ಮೊದಲ ಬಾರಿಗೆ ರಾಜ್ಯೋತ್ಸವ ನಿಮಿತ್ತ ನಗರದ ರಾಣಿ ಚನ್ನಮ್ಮ ಪ್ರತಿಮೆಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಠಿ ಮಾಡಲಾಯಿತು. ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಅವರು ಹೆಲಿಕಾಪ್ಟರ್‌ನಲ್ಲಿ ತೆರಳಿ, ಪುಷ್ಟವೃಷ್ಠಿಗೈದರು. ಇದರಿಂದ ರೋಮಾಂಚನರಾದ ಸಾವಿರಾರು ಕನ್ನಡಾಭಿಮಾನಿಗಳು ಕೇಕೆ ಹಾಕಿ, ಸಂಭ್ರಮಿಸಿದರು. ಹೆಲಿಕಾಪ್ಟರ್‌ ವೆಚ್ಚ ₹ 3.60 ಲಕ್ಷ ಹಣವನ್ನು ಮಹಾನಗರ ಪಾಲಿಕೆ ಭರಿಸಲಿದೆ.

ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಡಿದ್ದರು. ಹೋಟೆಲ್‌ ಮಾಲೀಕರ ಸಂಘವು ಸುಮಾರು 10,000 ಲಡ್ಡು ವಿತರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.