ADVERTISEMENT

ಯುವ ಕಾಂಗ್ರೆಸ್‌ಗೆ ರಕ್ಷಾ ರಾಮಯ್ಯ ಸಾರಥ್ಯ, ನಲಪಾಡ್ ಸ್ಪರ್ಧೆಯಿಂದ ವಜಾ?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 17:01 IST
Last Updated 4 ಫೆಬ್ರುವರಿ 2021, 17:01 IST
ರಕ್ಷಾ ರಾಮಯ್ಯ
ರಕ್ಷಾ ರಾಮಯ್ಯ   

ಬೆಂಗಳೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಆರ್‌. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಮತ್ತು ಉಪಾಧ್ಯಕ್ಷರಾಗಿ ಎಚ್.ಎಸ್. ಮಂಜುನಾಥ್‌ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಕಣದಲ್ಲಿ ರಕ್ಷಾ ರಾಮಯ್ಯ ಅವರಿಗೆ 56,271 ಮತಗಳು ಬಂದರೆ, ಎಚ್.ಎಸ್. ಮಂಜುನಾಥ್‌ಗೆ 18,137 ಮತಗಳು ಬಂದಿವೆ. ಇನ್ನೊಬ್ಬ ಅಭ್ಯರ್ಥಿ ಮೊಹಮ್ಮದ್‌ ನಲಪಾಡ್ ಅವರ ಫಲಿತಾಂಶವನ್ನೇ ತಡೆ ಹಿಡಿಯಲಾಗಿದೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಏಳು ಮಂದಿ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಹಂತದಲ್ಲಿ ದಕ್ಷಿಣ ಕನ್ನಡದ ಯುವ ಮುಖಂಡ ಮಿಥುನ್‌ ರೈ ಕಣದಿಂದ ಹಿಂದೆ ಸರಿದಿದ್ದರು. ಕಣದಲ್ಲಿದ್ದವರ ಪೈಕಿ, ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌, ಎನ್‌ಎಸ್‌ಯುಐ ಅಧ್ಯಕ್ಷ ಎಚ್. ಎಸ್. ಮಂಜುನಾಥ್ ಮತ್ತು ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ADVERTISEMENT

ಯುವ ಕಾಂಗ್ರೆಸ್‌ ಚುನಾವಣೆಯನ್ನು ‘ಫೇಮ್‌’ ಸಂಸ್ಥೆ ನಡೆಸಿತ್ತು.ರಕ್ಷಾ ರಾಮಯ್ಯ ಅವರಿಗಿಂತ ಮೊಹಮ್ಮದ್ ನಲಪಾಡ್‌ ಅವರು ಹೆಚ್ಚು ಮತಗಳನ್ನು ಪಡೆದಿದ್ದರೂ, ಅವರ ವಿರುದ್ಧ ಪ್ರಕರಣಗಳಿರುವ ಕಾರಣಕ್ಕೆ ಎಐಸಿಸಿ ಅಮಾನತು ಮಾಡಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಹೀಗಾಗಿ ಅವರ ಫಲಿತಾಂಶವನ್ನು ತಡೆಹಿಡಿದು, ಸ್ಪರ್ಧೆಯಿಂದಲೇ ವಜಾ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.