ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಚೀನಾ ಮಾದರಿ: ದಿಶಾ ಬಂಧನಕ್ಕೆ ಗುಹಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 20:49 IST
Last Updated 15 ಫೆಬ್ರುವರಿ 2021, 20:49 IST
ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಿಡುಗಡೆಗೆ ಒತ್ತಾಯಿಸಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಹಾಗೂ ಇತರರು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಿಡುಗಡೆಗೆ ಒತ್ತಾಯಿಸಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಹಾಗೂ ಇತರರು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು (ಕೇಂದ್ರ ಸರ್ಕಾರ) ಚೀನಾ ಮಾದರಿಯನ್ನು ಅನುಸರಿಸುತ್ತಿದ್ದು, ತುರ್ತುಪರಿಸ್ಥಿತಿಯ ಬಳಿಕ ದೇಶ ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸುತ್ತಿದೆ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಆತಂಕ ವ್ಯಕ್ತಪಡಿಸಿದರು.

ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನವನ್ನು ವಿರೋಧಿಸಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ನಡೆ ಅತ್ಯಂತ ಕರಾಳವಾದುದು. ಭಾರತೀಯ ಸಮಾಜ ಎಷ್ಟು ಅಧಃಪತನಕ್ಕೆ ಹೋಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಒಬ್ಬ ಹೆಣ್ಣು ಮಗಳು ಪರಿಸರ ರಕ್ಷಣೆ ಮತ್ತು ರೈತರ ಹೋರಾಟಕ್ಕೆ ಬೆಂಬಲ ನೀಡಿ, ಸರ್ಕಾರವನ್ನು ವಿರೋಧಿಸಿದ ಕಾರಣಕ್ಕೆ ಆಕೆಯನ್ನು ಬಂಧಿಸಿ, ಹಿಂಸಿಸಲಾಗಿದೆ. ಈ ದೇಶದ ಯುವ ಜನರಿಗೆ ಗೃಹ ಸಚಿವರು ಇದೇ ಸಂದೇಶ ನೀಡಲು ಬಯಸಿದ್ದಾರೆ. ಇದು ಚೀನಾ ಮಾದರಿ’ ಎಂದು ಹೇಳಿದರು.

ADVERTISEMENT

‘ಯುವತಿಯನ್ನು ಬಂಧಿಸಿ, ದೇಶ ದ್ರೋಹ ಪ್ರಕರಣ ದಾಖಲಿಸಿರುವುದು ವಸಾಹತು ಆಳ್ವಿಕೆಗಿಂತಲೂ ಹೇಯವಾದುದು. ಒಬ್ಬ ಯುವತಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲವೇ? ಈ ಘಟನೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿರುವುದು ಸಂತೋಷ. ಸರ್ಕಾರ ತಕ್ಷಣವೇ ಯುವತಿಯನ್ನು ಬಿಡುಗಡೆ ಮಾಡಬೇಕು. ಇಂದು ಈ ಯುವತಿಗೆ ಆಗಿರುವುದು ಮುಂದೆ ಯಾರಿಗೆ ಬೇಕಾದರೂ ಆಗಬಹುದು. ನಿಮ್ಮ ಪಕ್ಕದಲ್ಲಿರುವವರಿಗೂ ಇದೇ ಗತಿ ಆಗಬಹುದು. ಇದು ಮಾನಸಿಕ ಕ್ಷೋಭೆಯ, ಭಯ ಹುಟ್ಟಿಸುವ ಮತ್ತು ಹಗೆ ಸಾಧಿಸುವ ಸರ್ಕಾರ’ ಎಂದು ಗುಹಾ ಕಿಡಿ ಕಾರಿದರು.

‘ದೇಶದಲ್ಲಿ ಬಿಜೆಪಿಯ ಹೆಸರಿನಲ್ಲಿ ಕಳ್ಳತನಕ್ಕೆ ಅವಕಾಶವಿದೆ. ಆದರೆ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳ ಹೆಸರಿನಲ್ಲಿ ಶಾಂತಿಯುತವಾಗಿ ನಡೆಯುವ ಪ್ರತಿಭಟನೆಗಳು ಅಪರಾಧ’ ಎಂದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ‘ದಿಶಾ ರವಿ ಎಲ್ಲೂ ಸಹ ಬಾಂಬ್ ಹಾಕಿಲ್ಲ. ಬಂದೂಕು ಹಿಡಿದಿಲ್ಲ. ದೇಶದ ಮಾಹಿತಿಯನ್ನು ಬೇರೆಡೆ ಸೋರಿಕೆಯೂ ಮಾಡಿಲ್ಲ. ಆದರೂ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸುತ್ತಾರೆ ಎಂದರೆ ಏನರ್ಥ? ಈ ಬಂಧನದ ಮೂಲಕ ಕೇಂದ್ರ ಸರ್ಕಾರ ಪರೋಕ್ಷವಾಗಿ ಹೋರಾಟಗಾರರನ್ನು ಬೆದರಿಸಲು ಮುಂದಾಗಿದೆ’ ಎಂದು ಆರೋಪಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ, ‘ಪ್ರಶ್ನಿಸುವವರ ವಿರುದ್ಧ ಸರ್ಕಾರ ಹೇಗೆ ವರ್ತಿಸುತ್ತಿದೆ ಎಂಬುದಕ್ಕೆ ದಿಶಾ ಬಂಧನ ಸಾಕ್ಷಿ. ಯುವತಿಯನ್ನು ಏಕಾಏಕಿ ದೆಹಲಿಯಿಂದ ಬಂದು ಬಂಧಿಸುತ್ತಾರೆ ಎಂದರೆ ಎಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ‘ ಎಂದು ಪ್ರಶ್ನಿಸಿದರು.

300 ಕ್ಕೂ ಹೆಚ್ಚು ಪ್ರತಿಭಟನಕಾರರು ಭಾಗವಹಿಸಿದ್ದರು. ದಿಶಾ ಅವರ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರವೊಂದನ್ನು ಪೊಲೀಸ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.