ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿಗೆ ನೂತನ ಸಾರಥಿಯ ಆಯ್ಕೆ ಪ್ರಕ್ರಿಯೆ ಚುರುಕಾಗಿದ್ದು, ಈ ಸ್ಥಾನಕ್ಕೆ ಜಾನಪದ ವಿದ್ವಾಂಸರನ್ನೇ ಪರಿಗಣಿಸಲಿ ಎಂಬ ಕೂಗು ಜೋರಾಗಿದೆ.
ನಿವೃತ್ತ ಐಎಎಸ್ ಅಧಿಕಾರಿ ಎಚ್.ಎಲ್.ನಾಗೇಗೌಡರ ಕನಸಿನ ಕೂಸಾದ ಜಾನಪದ ಲೋಕ 1994ರಲ್ಲಿ
ಸ್ಥಾಪನೆಗೊಂಡಿದ್ದು, ಜನಪದ ಕಲೆ–ಕಲಾವಿದರಿಗೆ ಪೋಷಿಸುತ್ತಿದೆ. ಇದನ್ನು ಕರ್ನಾಟಕ ಜಾನಪದ ಪರಿಷತ್ತು ಹೆಸರಿನ ಟ್ರಸ್ಟ್ ನೋಡಿಕೊಳ್ಳುತ್ತಿದೆ.
ಎಚ್.ಎಲ್.ನಾಗೇಗೌಡರು, ಜಿ.ನಾರಾಯಣ ಅವರ ಬಳಿಕ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಪರಿಷತ್ತಿನ ಅಧ್ಯಕ್ಷರಾಗಿ ದಶಕದ ಕಾಲ ಕಾರ್ಯನಿರ್ವಹಿಸಿದ್ದಾರೆ. ತಿಮ್ಮೇಗೌಡರು ರಾಜೀನಾಮೆ ಸಲ್ಲಿಸಿ ತಿಂಗಳು ಕಳೆದರೂ ಇನ್ನೂ ಹೊಸಬರ ನೇಮಕ ಆಗಿಲ್ಲ.
ಜೂನ್ 30ರಂದು ನಡೆದಿದ್ದ ಪರಿಷತ್ತಿನ ಆಡಳಿತ ಮಂಡಳಿ ಸಭೆ ಯಲ್ಲಿ ತಿಮ್ಮೇಗೌಡರು ರಾಜೀನಾಮೆ ಪ್ರಕಟಿಸಿದ್ದು, ‘ಆ ಜಾಗದಲ್ಲಿ ಮತ್ತೊಬ್ಬ ನಿವೃತ್ತ ಐಎಎಸ್ ಅಧಿಕಾರಿಯನ್ನೇ ತರಬೇಕು. ಆಗ ಸರ್ಕಾರದಿಂದ ಕೆಲಸ ಗಳು ಆಗುತ್ತವೆ’ ಎಂದು ಪ್ರತಿಪಾದಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವಿಠಲಮೂರ್ತಿ ಮೊದಲಾದವರ ಹೆಸರು
ಪ್ರಸ್ತಾಪಿಸಿದ್ದರು.
ಇದಕ್ಕೆ ಟ್ರಸ್ಟಿನ ಹಿರಿಯ ಸದಸ್ಯರಾದ ಹಿ.ಶಿ.ರಾಮಚಂದ್ರೇಗೌಡ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದು, ‘ಅಧಿಕಾರಿಗಳಿಗೆ ಜನಪದದ ಗಂಧ–ಗಾಳಿ ಕಡಿಮೆ. ಹೀಗಾಗಿ ಜನಪದ ಹಿನ್ನೆಲೆ ಉಳ್ಳವರನ್ನೇ ಆರಿಸಬೇಕು’ ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ಒಮ್ಮತ ಮೂಡದ ಕಾರಣಕ್ಕೆ ರಾಮಚಂದ್ರೇಗೌಡ, ಜಯಪ್ರಕಾಶ ಗೌಡ ತಮ್ಮ ಸದಸ್ಯ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
ಇದೇ 17ರಂದು ಪರಿಷತ್ತಿನ ಆಡಳಿತ ಮಂಡಳಿ ಸಭೆ ನಿಗದಿಯಾಗಿದೆ. ಅಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದು, ಹಾಲಿ ಮ್ಯಾನೇಜಿಂಗ್
ಟ್ರಸ್ಟಿ ಆದಿತ್ಯ ನಂಜರಾಜ್ ಅವರನ್ನೇ ಅಧ್ಯಕ್ಷ ಹುದ್ದೆಗೆ ಏರಿಸಲು ಮತ್ತೊಂದು ಗುಂಪು ಪ್ರಯತ್ನ ನಡೆಸಿದೆ ಎನ್ನಲಾಗಿದೆ.
ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಜಾನಪದ ಲೋಕಕ್ಕೆ ಕಲಾಸಕ್ತಿಯುಳ್ಳ, ಸಮರ್ಥ ಸಾರಥಿಯನ್ನು ನೇಮಿಸಬೇಕು ಎನ್ನುವುದು ಜನಪದ ಆಸಕ್ತರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.