ಮಂಗಳೂರು/ಬಾಳೆಹೊನ್ನೂರು: ಸಿದ್ದರಾಮಯ್ಯ ಅವರು ಶೃಂಗೇರಿಯಲ್ಲಿ ಶಾರದಾಂಬೆ ದರ್ಶನ ಮಾಡಿ, ಪೂಜೆ ಸಲ್ಲಿಸಿದರು. ನಂತರ ಶಾರದಾ ಪೀಠದಲ್ಲಿ ವಿಧುಶೇಖರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.ಸಣ್ಣ ರುದ್ರಾಕ್ಷಿ ಹೊಂದಿರುವ ಹಾರವನ್ನು ಸಿದ್ದರಾಮಯ್ಯ ಅವರ ಕೊರಳಿಗೆ ಹಾಕಿದ ಶ್ರೀಗಳು, ‘ಇದನ್ನು ಕಾಶಿಯಿಂದ ತಂದಿದ್ದು ಚುನಾವಣೆವರೆಗೂ ಹಾಕಿಕೊಳ್ಳಿ’ ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಕ್ಷೇತ್ರನಾಥ ವೀರಭದ್ರಸ್ವಾಮಿ, ರೇಣುಕಾಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಸಿದ್ದರಾಮಯ್ಯ ಅವರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಪೀಠದ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿ ಅವರು, ‘ಧರ್ಮ ಒಡೆಯುವ ಪ್ರಯತ್ನ ಮಾಡಿರಲಿಲ್ಲ. ಕೆಲವರು ನನ್ನ ದಾರಿ ತಪ್ಪಿಸಿದ್ದರು. ಅದರಿಂದಾಗಿ ನನಗೆ ಖಂಡಿತವಾಗಿಯೂ ಪಶ್ಚಾತ್ತಾಪವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು’ ಎಂದು ತಿಳಿಸಿದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವೀರಶೈವ ಧರ್ಮದಿಂದ ಲಿಂಗಾಯತ ಧರ್ಮ ಒಡೆಯುವುದಕ್ಕೆ ಕುಮ್ಮಕ್ಕು ನೀಡಿದ ಆರೋಪ ಅವರ ಮೇಲಿತ್ತು. ಈ ಬಗ್ಗೆ ಅವರ ಮನಸ್ಸಿನಲ್ಲಿದ್ದ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ಬಿಚ್ಚಿಟ್ಟಿದ್ದಾರೆ. ಧರ್ಮದ ವಿಚಾರದಲ್ಲಿ ಯಾವತ್ತೂ ಆವೇಶ ಮಾಡುವುದಿಲ್ಲ. ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ’ ಎಂದರು.
‘ವೀರಶೈವ ಧರ್ಮದ ಇತಿಹಾಸ, ಪರಂಪರೆ, ಪಂಚ ಪೀಠಗಳ ಪ್ರಾಚೀನ ಇತಿಹಾಸ, 12ನೇ ಶತಮಾನದಲ್ಲಿ ಆಗಿ ಹೋದ ಬಸವಾದಿ ಶಿವಶರಣರ ಚಿಂತನೆಗಳನ್ನು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದನ್ನು ಕೇಳಿ ಅವರು ಹರ್ಷ ಚಿತ್ತರಾದರು’ ಎಂದರು.
‘ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಅಮಾಯಕರ ಪ್ರಾಣಗಳು ಹರಣವಾಗಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಮಾತಿನಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಎಲ್ಲಾ ಜನಾಂಗದವರೂ ಕೂಡಿ ಬಾಳಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಎಲ್ಲ ರಾಜಕಾರಣಿಗಳ ಗುರಿಯಾಗಬೇಕು. ಮಾತಿನ ಶೈಲಿಯಲ್ಲಿ ಮೃದು ಧೋರಣೆ ಇರಲಿ ಎಂದು ಸಲಹೆ ನೀಡಿದ್ದೇನೆ’ ಎಂದು ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.