ADVERTISEMENT

‘ಸಿ.ಎಂ ಕಣ್ಣೀರು ಹಾಕುವ ಬದಲು, ಡಿಸಿಎಂ ಆಗಿ ಆನಂದವಾಗಿರಿ’- ರಾಮದಾಸ್ ಆಠವಲೆ ಸಲಹೆ

ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ಗೆ ಕೇಂದ್ರ ಸಚಿವ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 19:45 IST
Last Updated 15 ಏಪ್ರಿಲ್ 2019, 19:45 IST
ರಾಮದಾಸ್ ಆಠವಲೆ
ರಾಮದಾಸ್ ಆಠವಲೆ   

ಬೆಂಗಳೂರು: ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ನಿತ್ಯ ಕಣ್ಣಿರು ಹಾಕುವ ಬದಲು, ಬಿಜೆಪಿ ಜತೆ ಸೇರಿ ಉಪಮುಖ್ಯಮಂತ್ರಿಯಾಗಿ ನಗುತಾ ಇರುವುದು ಸೂಕ್ತ ಎಂದು ಕೇಂದ್ರ ಸಾಮಾಜಿಕ ನ್ಯಾಯ ರಾಜ್ಯ ಸಚಿವ ರಾಮದಾಸ್ ಆಠವಲೆ ಸಲಹೆ ನೀಡಿದರು.

‘ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಯುಪಿಎ ಮೈತ್ರಿಕೂಟ ಬಿಟ್ಟು, ಎನ್‌ಡಿಎ ಮೈತ್ರಿಕೂಟ ಸೇರಲು ಈ ಮೂಲಕ ಆಹ್ವಾನ ನೀಡುತ್ತಿದ್ದೇನೆ. ಅಗತ್ಯ ಬಿದ್ದರೆ ಚುನಾವಣೆ ಮುಗಿದ ನಂತರ ನಾನೇ ಮಧ್ಯಸ್ಥಿಕೆ ವಹಿಸುತ್ತೇನೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪ್ರಧಾನಿ ಆಗಿದ್ದಾಗ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನನಗೆ ಗೌರವ ಇದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‌‌ಪ್ರಧಾನಿ ನರೇಂದ್ರ ಮೋದಿ ವಿಕಾಸ ಪುರಷ. ಕೇಂದ್ರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ರಾಜ್ಯದಲ್ಲೂ ಬಿಜೆಪಿ ಆಡಳಿತ ಇರಬೇಕು ಎಂದರು.‌

ADVERTISEMENT

‘ಎನ್‌ಡಿಎ ಸಭೆಯಲ್ಲಿ ಹಲವು ಬಾರಿ ನಾನು ಒತ್ತಡ ಹೇರಿದ್ದರ ಫಲವಾಗಿ ಮೇಲ್ಜಾತಿಯ ಬಡವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ಮೋದಿ ಕೈಗೊಂಡರು. ಖಾಸಗಿ ಕ್ಷೇತ್ರದಲ್ಲಿ ದಲಿತರಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಅದು ಕೂಡ ಸಾಕಾರ ಆಗಲಿದೆ. ಮುಂದಿನ 10 ವರ್ಷ ಮೋದಿ ಅವರೇ ಅಧಿಕಾರದಲ್ಲಿದ್ದರೆ ದಲಿತರ ಪರವಾದ ಇನ್ನಷ್ಟು ಕಾರ್ಯಕ್ರಮಗಳು ರೂಪುಗೊಳ್ಳಲಿವೆ’ ಎಂದು ಹೇಳಿದರು.

ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂಬುದು ವಿರೋಧ ಪಕ್ಷಗಳ ಅಪಪ್ರಚಾರ. ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಂವಿಧಾನಕ್ಕೆ ಆಗಾಗ ತಿದ್ದುಪಡಿ ಆಗಿದೆ, ಮುಂದೆ ಕೂಡ ಮಾಡಬಹುದು. ಹಾಗೆಂದ ಮಾತ್ರಕ್ಕೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ಬದಲಿಸಲು ಯಾರಿಂದಲೂ ಆಗುವುದಿಲ್ಲ ಎಂದರು.

ರಾಹುಲ್ ಗಾಂಧಿ ಪ್ರಧಾನಿ ಆಗುವ ಕನಸು ಕಾಣಬಾರದು. ಏಕೆಂದರೆ ನರೇಂದ್ರ ಮೋದಿ ಇರುವ ತನಕ ಆ ಕನಸು ನನಸಾಗದು. ಎನ್‌ಡಿಎ ವಿರುದ್ಧ ಮಹಾಘಟಬಂಧನ ಎನ್ನುವುದು ಬರೀ ಬಾಯಿ ಮಾತಿನದ್ದು. ಅಲ್ಲಿರುವ ‌ಎಲ್ಲಾ ಪಕ್ಷದ ಮುಖ್ಯಸ್ಥರೂ ಪ್ರಧಾನಿ ಅಭ್ಯರ್ಥಿಗಳು. ಹೀಗಾಗಿ ಘಟಬಂಧನ ಸಾಕಾರವಾಗದು ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ)ದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಉಳಿದೆಡೆ ಬಿಜೆಪಿಗೆ ಬೆಂಬಲ ನೀಡಲಾಗಿದೆ ಎಂದರು.

ಬಜೆಟ್‌ನಲ್ಲಿ ದಲಿತರಿಗೆ ಮೀಸಲಿಟ್ಟಿರುವ ಹಣದಲ್ಲಿ ಯಾವ್ಯಾವ ಯೋಜನೆಗೆ, ಯಾವ್ಯಾವ ರಾಜ್ಯದಲ್ಲಿ ಎಷ್ಟು ಖರ್ಚಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಆಠವಲೆ, ಮೋದಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ದಲಿತರಿಗೆ ಅನುಕೂಲವಾಗಿದೆ ಎಂದಷ್ಟೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.