ಬೆಂಗಳೂರು: ವಕ್ಫ್ ಆಸ್ತಿ ಸಂರಕ್ಷಣೆಗಾಗಿ ಕಂದಾಯ ಇಲಾಖೆ 2006–08ರ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಿಂದಲೂ ರೈತರಿಗೆ ನೋಟಿಸ್ ನೀಡುತ್ತಾ ಬಂದಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಆರೋಪ ಮಾಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಮಾದರಿ ವಕ್ಫ್ ನಿಯಮಗಳನ್ನು ರಚಿಸಿ, ಎಲ್ಲ ರಾಜ್ಯಗಳಲ್ಲೂ ವಕ್ಫ್ ಆಸ್ತಿ ಸಂರಕ್ಷಣೆ ಮಾಡಲು ಸೂಚಿಸಿತ್ತು. ಕರ್ನಾಟಕದಲ್ಲಿ 2006ರಲ್ಲೇ ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ವಕ್ಫ್ ಕಾಯ್ದೆ ಅಡಿ ನೋಟಿಸ್ ನೀಡಿ, ಖಾತೆ ಬದಲಾವಣೆ ಮಾಡಲಾಗಿದೆ. 2019ರಿಂದ 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ 219 ಪ್ರಕರಣಗಳಲ್ಲಿ ನೋಟಿಸ್ ನೀಡಲಾಗಿದೆ ಎಂದು ಅಂಕಿಅಂಶ ಬಿಡುಗಡೆ ಮಾಡಿದ್ದಾರೆ.
ವಕ್ಫ್ ಕಾಯ್ದೆ ಅಡಿಯಲ್ಲಿ ಆಸ್ತಿ ಒತ್ತುವರಿ ಮಾಡಿದ, ಕಬಳಿಸಿದವರಿಗೆ ನೋಟಿಸ್ ನೀಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ರಾಜ್ಯದ ಕೆಲ ಭಾಗಗಳಲ್ಲಿ ನೀಡಿದ ನೋಟಿಸ್ ಪ್ರಕರಣವನ್ನು ಕೇಂದ್ರ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಕಾಯ್ದೆಗೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದೆ. ರಾಜಕೀಯ ಬಣ್ಣ ಬಳಿಯುವ ಮೂಲಕ ಜನರ ಭಾವನೆಗಳನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದ್ದಾರೆ.
ಸಂವಿಧಾನದ ಪ್ರಕಾರ ವಿವಿಧ ಧರ್ಮಗಳಿಗೆ ವಿಶೇಷ ಕಾಯ್ದೆಗಳನ್ನು ರಚಿಸಲಾಗಿದೆ. ಅಂತಹ ಕಾಯ್ದೆಗಳನ್ನು ವಕ್ಫ್ ಕಾಯ್ದೆಯೂ ಒಂದು. ಹಿಂದಿನ ಯುಪಿಎ ಸರ್ಕಾರ ವಕ್ಫ್ ಅಭಿವೃದ್ಧಿ ನಿಗಮ ಸ್ಥಾಪಿಸಿ ₹500 ಕೋಟಿ ಅನುದಾನ ನೀಡಿತ್ತು. ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಅನುದಾನವನ್ನೇ ನೀಡಿಲ್ಲ. ಈಗ ವಿಜಯಪುರ ಜಿಲ್ಲೆಯ ಪ್ರಕರಣ ಇಟ್ಟುಕೊಂಡ ಬಿಜೆಪಿ ನಾಯಕರು ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.