ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ಆರೋಪಿ ಎನ್ನಲಾದ ಶ್ರವಣಕುಮಾರ್ ಅವರ ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಮತ್ತೊಬ್ಬ ಮಗ ಚೇತನ್ ಅವರನ್ನು ಎಸ್‌ಐಟಿ ಪೊಲೀಸರು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಪಿ.ಸೂರ್ಯಕುಮಾರ್ ದೂರಿದ್ದಾರೆ.
ಗೃಹ ಇಲಾಖೆ ಕಾರ್ಯದರ್ಶಿ, ಎಸ್‌ಐಟಿ, ಕಬ್ಬನ್ ಪಾರ್ಕ್ ಹಾಗೂ ಸದಾಶಿವನಗರ ಪೊಲೀಸ್ ಠಾಣಾಧಿಕಾರಿಗಳನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
‘ಮಾ.13ರಂದು ಮನೆಗೆ ದಾಳಿ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು, ಶ್ರವಣ್ ಬಗ್ಗೆ ವಿಚಾರಿಸಿದ್ದರು. ಮಾಹಿತಿ ಇಲ್ಲ ಎಂದಾಗ ಮತ್ತೊಬ್ಬ ಮಗ ಚೇತನ್ ಅವರನ್ನು ಕರೆದೊಯ್ದರು. ಮನೆ ಖರೀದಿಗೆಂದು ಇಟ್ಟಿದ್ದ ₹25 ಲಕ್ಷ ಮೊತ್ತದ ಡಿ.ಡಿ, ಸಿಸಿ ಕ್ಯಾಮರದ ಡಿವಿಆರ್ ವಶಕ್ಕೆ ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಮಾ.15ರಂದು ಮನೆಗೆ ಹಿಂದಿರುಗಿದ ಚೇತನ್‌ಗೆ ಪೊಲೀಸರು ಮತ್ತೆ ಸಮನ್ಸ್ ನೀಡಿ 16ರಂದು ಕರೆಸಿಕೊಂಡಿದ್ದಾರೆ. ಅಂದಿನಿಂದ ನಮ್ಮ ಸಂಪರ್ಕಕ್ಕೆ ಮಗ ಬಂದಿಲ್ಲ. ಕಬ್ಬನ್ ಪಾರ್ಕ್ ಮತ್ತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶ್ರವಣ್‌ಕುಮಾರ್ ಬಂಧನಕ್ಕೆ ಮುಂದಾಗಿರುವ ಪೊಲೀಸರು ಒತ್ತಡ ಹೇರಲು ಕುಟುಂಬ ಸದಸ್ಯರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದಾರೆ. ಚೇತನ್ ಅವರನ್ನು ಕೂಡಲೇ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.