ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣ ಸಂಬಂಧ ಮಂಗಳವಾರ ಬಿಜೆಪಿ– ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಮುಂದುವರಿದಿದೆ.
‘ಆ ಘಟನೆಯ (ಸಿ.ಡಿ. ಪ್ರಕರಣ) ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾ ನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ? ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಪರೋಕ್ಷವಾಗಿ ಟ್ವೀಟ್ ಮಾಡಿದೆ.
ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್, ‘ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕ ಎನ್ನುತ್ತ ಯಡಿಯೂರಪ್ಪ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ?, ಶಾಸಕ ಯತ್ನಾಳ ಹೇಳಿದಂತೆ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್‌ಮೇಲ್ ಮಾಡಲಾಗುತ್ತದೆ ಎಂಬ ಮಾತನ್ನ ನೀವೂ ಪರೋಕ್ಷವಾಗಿ ಹೇಳುತ್ತಾ ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರೆಸುತ್ತಿರುವಿರಾ!’ ಎಂದು ತಿರುಗೇಟು ನೀಡಿದೆ.
ಇದೇ ವಿಚಾರವಾಗಿ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ‘ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ!? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ’ ಎಂದು ಆರೋಪಿಸಿದೆ.
ಇದನ್ನೂ ಓದಿ... ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ: ಶಿವಸೇನಾ
‘ಬೆಳಗಾವಿ ಗಡಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಿಮ್ಮ ನಿಲುವೇನು? ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಮೈತ್ರಿ ಸರ್ಕಾರದ ನಾಯಕರು ಗಡಿ ವಿಚಾರದಲ್ಲಿ ಗೊಂದಲ ಎಬ್ಬಿಸುತ್ತಿದ್ದಾರೆ. ಮಹಾಮೈತ್ರಿಯಲ್ಲಿ ರಾಜಕೀಯ ಅಸ್ಥಿರತೆ ಉಂಟಾದಾಗಲೆಲ್ಲ ಕಾಂಗ್ರೆಸ್ ಕುಮ್ಮಕ್ಕಿನಿಂದ ಗಡಿವಿವಾದ ಮುನ್ನೆಲೆಗೆ ಬರುತ್ತದೆ’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಅವರೇ, ಯಾವ ಮಾನದಂಡ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸೋಣ ಎಂದು ಹೇಳುತ್ತಿದ್ದೀರಿ? ಲೋಕಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಸೋತಿದ್ದೀರಿ, ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸೋತಿದ್ದೀರಿ. ಮುಂದೆ ಕಾಂಗ್ರೆಸ್ ಸೋಲುವುದನ್ನು ಅರಿತು ಡಿ.ಕೆ.ಶಿವಕುಮಾರ್ ಅವರ ಬಲ ಕುಗ್ಗಿಸುವ ಪ್ರಯತ್ನದ ಭಾಗವೇ ಇದು?’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್‌ಮೇಲ್ ಸಂಪುಟ. ಹನಿಟ್ರಾಪ್ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಇದು ಯಡಿಯೂರಪ್ಪ ಫ್ಯಾಮಿಲಿ ಸರ್ಕಾರ. ‘ದಂಡ’ದ ಸರ್ಕಾರಕ್ಕೆ ‘ಮಾನ’ ಎಲ್ಲಿದೆ? ತಾಕತ್ತಿದ್ದರೆ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ’ ಎಂದು ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.