ಬೆಂಗಳೂರು: ಸಿ.ಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ದೂರಿನಡಿ ಸದಾಶಿವ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಲಾಗಿದೆ. ವಿಚಾರಣೆಗಷ್ಟೇ ಸೀಮಿತವಾಗಿದ್ದ ಎಸ್‌ಐಟಿಗೆ ’ಎಫ್‌ಐಆರ್’ ಬಲ ಬಂದಿದ್ದು, ‘ಹನಿಟ್ರ್ಯಾಪ್’ ಆಯಾಮದಲ್ಲಿ ತನಿಖೆ ಚುರುಕುಗೊಂಡಿದೆ.
ತಮ್ಮ ಆಪ್ತರಾದ ಮಾಜಿ ಶಾಸಕ ಎಂ.ವಿ. ನಾಗರಾಜು ಮೂಲಕ ಪೊಲೀಸರಿಗೆ ದೂರು ನೀಡಿದ್ದ ರಮೇಶ ಜಾರಕಿ
ಹೊಳಿ, ‘ಸಿ.ಡಿ.ಷಡ್ಯಂತ್ರದಲ್ಲಿ ಹಲವು ಜನರಿದ್ದು, ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ’ ಎಂದಿದ್ದರು.
ದೂರಿನನ್ವಯ, ಅಪರಾಧ ಸಂಚು (ಐಪಿಸಿ 34), ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ), ಬೆದರಿಸಿ ಸುಲಿಗೆಗೆ ಯತ್ನ (ಐಪಿಸಿ 385), ಸಹಿ ನಕಲು ಮಾಡಿದ (ಐಪಿಸಿ 465) ಹಾಗೂ ಗೌರವ ಹಾಳು ಮಾಡಲು ನಕಲು ಮಾಡಿದ (ಐಪಿಸಿ 469) ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಈಗ ಅದೇ ಎಫ್‌ಐಆರ್ ಆಧರಿಸಿ ಎಸ್‌ಐಟಿ ತನಿಖೆ ಶುರು ಮಾಡಿದೆ.
ಜಾಹೀರಾತು ಕಂಪನಿ ಮೇಲೆ ದಾಳಿ: ಪ್ರಕರಣದಡಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದಿದ್ದ ಎಸ್‌ಐಟಿ ತಂಡ, ಕುಮಾರಕೃಪಾ ರಸ್ತೆಯಲ್ಲಿರುವ ಜಾಹೀರಾತು ಕಂಪನಿಯೊಂದರ ಮೇಲೆ ದಾಳಿ ಮಾಡಿ, ದಾಖಲೆ ಪರಿಶೀಲಿಸಿತು.
‘ಸಿ.ಡಿ ತಯಾರಿಗೂ ಮುನ್ನ ಜಾಹೀರಾತು ಕಂಪನಿಯಲ್ಲಿ ವಿಡಿಯೊ ಸಂಕಲನ ಮಾಡಿರುವ ಮಾಹಿತಿ ಲಭ್ಯವಾಗಿತ್ತು. ಅದೇ ಕಾರಣಕ್ಕೆ ಕಚೇರಿ ಮೇಲೆ ದಾಳಿ ಮಾಡಿ ಹಲವು ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಅವುಗಳ ಪರಿಶೀಲನೆ ನಡೆಸಬೇಕಿದೆ’ ಎಂದು ಮೂಲಗಳು ಹೇಳಿವೆ.
ಮೂವರು ವಶಕ್ಕೆ: ಸಿ.ಡಿಯಲ್ಲಿರುವ ಯುವತಿ, ಅವರ ಸ್ನೇಹಿತರ ಜೊತೆ ಒಡನಾಟ ಹೊಂದಿದ್ದರು ಎನ್ನಲಾದ ಮೂವರನ್ನು ಎಸ್‌ಐಟಿ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದಿದ್ದಾರೆ. ಆಡುಗೋಡಿಯಲ್ಲಿರುವ ಸಿಸಿಬಿಯ ವಿಶೇಷ ಕೊಠಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೊತ್ತಾಗಿದೆ.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗದ ಎಫ್‌ಐಆರ್
ಸಿ.ಡಿ. ಬಗ್ಗೆ ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರಿನ ವಿಚಾರಣೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಇದುವರೆಗೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲ.
ಇದರ ನಡುವೆಯೇ ರಮೇಶ ಜಾರಕಿಹೊಳಿ ನೀಡಿದ್ದ ದೂರಿನಡಿ ಸದಾಶಿವನಗರದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅದರ ತನಿಖೆಯನ್ನು ಎಸ್‌ಐಟಿ ಆರಂಭಿಸಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ, ಅದು ಸಹ ಎಸ್‌ಐಟಿಗೆ ಹಸ್ತಾಂತರವಾಗುವ ಸಾಧ್ಯತೆ ಇದೆ.
‘ಹೇಳಿಕೆ ನೀಡುವಂತೆ ಯುವತಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.ನಂತರವೇ ಮುಂದಿನ ಕ್ರಮ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸ್ವಯಂಪ್ರೇರಿತ ದೂರು ದಾಖಲು
ಧಾರವಾಡ: ‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವೂ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದೆ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿ.ಡಿಯಲ್ಲಿರುವ ಯುವತಿ ಸದ್ಯ ರಾಜ್ಯ ಮಹಿಳಾ ಆಯೋಗದಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲಿ ವಿಚಾರಣೆ ನಡೆಯಲಿದೆ. ಅವರಿಗೆ ಸಹಕಾರಿಯಾಗಿಯೇ ನಾವು ಕೆಲಸ ಮಾಡುತ್ತೇವೆ. ಯಾವುದೇ ರಾಜಿ ಇಲ್ಲ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.