ADVERTISEMENT

‘ವಸ್ತು’ವೇನೆಂದು ಬಹಿರಂಗಪಡಿಸಿ, ಅವರ ಹಗರಣವನ್ನೂ ಬಿಚ್ಚಿಡುವೆ: ರಮೇಶ ಜಾರಕಿಹೊಳಿ

ಸೋದರನಿಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:30 IST
Last Updated 1 ಡಿಸೆಂಬರ್ 2019, 11:30 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ನಾನು ಕಳೆದುಕೊಂಡಿರುವ ‘ವಸ್ತು’ ಏನು ಎನ್ನುವುದನ್ನು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಬಹಿರಂಗಪಡಿಸಲಿ. ಅವರ ಹಗರಣಗಳ ಕುರಿತು ಆ ವೇದಿಕೆಯಲ್ಲೇ ತಿಳಿಸುತ್ತೇನೆ’ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು.

ಗೋಕಾಕದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾವ ವಸ್ತು ಎನ್ನುವುದು ಗೊತ್ತಿಲ್ಲ. ಅವರ ಬಗ್ಗೆ ಹೇಳಿದರೆ ಮನೆತನದ ಗೌರವ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿದ್ದೇನೆ. ತಂದೆ ಲಕ್ಷ್ಮಣ ಜಾರಕಿಹೊಳಿ ಹೋರಾಡಿ ಸಾಮ್ರಾಜ್ಯ ಕಟ್ಟಿದ್ದಾರೆಯೇ ಹೊರತು, ಸತೀಶ ಕಟ್ಟಿಲ್ಲ’ ಎಂದು ಟಾಂಗ್ ನೀಡಿದರು.

‘ತಂದೆ ಆದರ್ಶ ಪಾಲಿಸಿ ಈ ಮಟ್ಟಕ್ಕೆ ಬಂದಿದ್ದೇನೆ. ಅವರು ಶ್ರೀಮಂತರಾಗಿರಲಿಲ್ಲ, ಕೂಲಿ ಮಾಡಿ ಬೆಳೆಸಿದ್ದಾರೆ’ ಎಂದು ಭಾವುಕರಾದರು.

‘ನಾಮಪತ್ರ ಸಲ್ಲಿಸಿ ಎಲ್ಲಿದ್ದರೂ ಜನ ನನ್ನನ್ನು ಗೆಲ್ಲಿಸುತ್ತಾರೆ. ಅಷ್ಟು ಪ್ರೀತಿ ಇಟ್ಟಿದ್ದಾರೆ. ಅವರು ಕೈಬಿಟ್ಟ ದಿನ ಝೀರೊ ಆಗುತ್ತೇನೆಯೇ ಬೇರೆಯವರು ಏನೂ ಮಾಡಲಾಗದು. ಇಲ್ಲಿನ ಜನ ನನ್ನನ್ನು ಅನರ್ಹ ಶಾಸಕ ಎಂದು ಭಾವಿಸಿಲ್ಲ. ಅಧಿಕಾರಿಗಳೂ ಪ್ರೀತಿಸುತ್ತಾರೆ. ನೆರೆ ಬಂದಾಗ ಬಹಳ ಕೆಲಸ ಮಾಡಿದ್ದೇನೆ. ಸತೀಶ್‌ ರೀತಿ ಟೋಪಿ ಹಾಕಿಕೊಂಡು, ಪೋಟೊ ತೆಗೆಸಿಕೊಂಡು ಪ್ರಚಾರ ಮಾಡಿಲ್ಲ’ ಎಂದು ಕುಟುಕಿದರು.

‘ಅಳಿಯ ಅಂಬಿರಾವ್ ಪಾಟೀಲ ಇಲ್ಲಿನ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಮುಜುಗರವಾಗಿ ಹತಾಶೆಯಿಂದ ಅವರ ಬಗ್ಗೆ ಸತೀಶ ಟೀಕಿಸುತ್ತಿದ್ದಾರೆ’ ಎಂದರು.

‘ಅಂಬಿರಾವ್ 30 ವರ್ಷಗಳಿಂದ ಗೋಕಾಕದಲ್ಲಿದ್ದಾರೆ. ಜನರು ಯಾವುದೇ ಕೇಸ್ ತಂದರೂ ಕೋರ್ಟ್‌ಗೆ ಕಳುಹಿಸದೇ ಇಲ್ಲೇ ಮುಗಿಸಿ ಕಳುಹಿಸುತ್ತಿದ್ದಾರೆ. ಅವರಿಗೆ ಅನುಕೂಲ ಮಾಡುತ್ತಿದ್ದಾರೆ. ಆದರೆ, ಸತೀಶನ ಕ್ಷೇತ್ರದಲ್ಲಿ ಪಿಎಗಳ ಹಾವಳಿ ಇದೆ. ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ’ ಎಂದು ಹೇಳಿದರು.

‘ಸೋದರ ಲಖನ್‌ಗೆ ಶುಭ ಹಾರೈಸುತ್ತೇನೆ. ಆತ ಶಾಸಕನಾದರೆ ಸಂತೋಷಪಡುತ್ತೇನೆ. ಆದರೆ, ಸತೀಶನ ಮಾತು ಕೇಳಿ ಹಾಳಾಗಬಾರದು’ ಎಂದು ಮಾರ್ಮಿಕವಾಗಿ ಹೇಳಿದರು.

‘ಸ್ಪೀಕರ್ ಆದೇಶ ಉಲ್ಲೇಖಿಸಿ, ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಲಾಗದು ಎಂದು ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ. ಆದರೆ, ಸ್ಪೀಕರ್‌ ಆದೇಶ ಸುಪ್ರೀಂ ಕೋರ್ಟ್‌ನಲ್ಲಿ ಒಂದು ಗಂಟೆಯೂ ನಿಲ್ಲುವುದಿಲ್ಲ. ನ್ಯಾಯಾಲಯದಲ್ಲಿ ನಮಗೆ ಜಯ ಸಿಗುವ ವಿಶ್ವಾಸವಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆದರೆ, ಯಾವ ಪಕ್ಷದಿಂದ ಎನ್ನುವುದನ್ನು ತೀರ್ಮಾನಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.