ADVERTISEMENT

‘ವ್ಯವಹಾರ’ದ ಬೆನ್ನುಬಿದ್ದಿದ್ದ ಐ.ಟಿ?

ಜಿ.ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:38 IST
Last Updated 12 ಅಕ್ಟೋಬರ್ 2019, 20:38 IST
ರಮೇಶ್‌
ರಮೇಶ್‌   

ಬೆಂಗಳೂರು: ಕಾಂಗ್ರೆಸ್‌ ಶಾಸಕ ಜಿ. ಪರಮೇಶ್ವರ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐ.ಟಿ ಅಧಿಕಾರಿಗಳು ದಾಳಿ ನಡೆಸಿ ಸತತವಾಗಿ ಮೂರು ದಿನಗಳಿಂದ ದಾಖಲೆಗಳನ್ನು ಪರಿಶೀಲಿಸುತ್ತಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾದ ಅವರ ಆಪ್ತ ಸಹಾಯಕ ಎಂ. ರಮೇಶ್‌ ನಿಗೂಢವಾಗಿ ಮೃತಪಟ್ಟಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ರಮೇಶ್‌ ಶವ ನೇಣುಬಿಗಿದ ಸ್ಥಿತಿಯಲ್ಲಿ ‍ಪತ್ತೆಯಾಗಿದೆ. ಐ.ಟಿ ಅಧಿಕಾರಿಗಳ ಕಿರುಕುಳದಿಂದ ರಮೇಶ್‌ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ, ಈ ಆರೋಪವನ್ನು ಐ.ಟಿ ಮೂಲಗಳು ನಿರಾಕರಿಸಿವೆ. ಐ.ಟಿ ಅಧಿಕಾರಿಗಳು ಯಾವುದೇ ಹಂತದಲ್ಲೂ ರಮೇಶ್‌ ಮನೆಯ ಮೇಲೆ ದಾಳಿ ಮಾಡಿಲ್ಲ. ಅವರ ವಿಚಾರಣೆಯನ್ನೂ ನಡೆಸಿಲ್ಲ. ಆದರೆ, ಪರಮೇಶ್ವರ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುವಾಗ ರಮೇಶ್‌ ಹಾಜರಿದ್ದುದು ನಿಜ ಎಂದು ಸ್ಪಷ್ಟಪಡಿಸಿವೆ.

ADVERTISEMENT

‘ಪರಮೇಶ್ವರ ಹಾಗೂ ಅವರ ಕೆಲವು ಆಪ್ತ ಶಾಸಕರ ವೈಯಕ್ತಿಕ ವ್ಯವಹಾರಗಳು ರಮೇಶ್ ಅವರಿಗೆ ಗೊತ್ತಿತ್ತು. ಆ ಮಾಹಿತಿಯನ್ನು ತಿಳಿಸುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ಮಾಹಿತಿ ನೀಡದಿದ್ದರೆ ಜೈಲಿನಲ್ಲೇ ಕೊಳೆಯುವಂತೆ ಮಾಡಲಾಗುವುದೆಂದು ಬೆದರಿಸಿದ್ದರು. ಇದರಿಂದಾಗಿ ಭೀತಿಗೊಳಗಾಗಿದ್ದ ರಮೇಶ್ ಆತ್ಮಹತ್ಯೆ ಮಾಡಿ
ಕೊಂಡಿದ್ದಾರೆ’ ಎಂದು ಕುಟುಂಬದ ಸದಸ್ಯರು ಆರೋಪಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ರಮೇಶ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅವರ ಸಮ್ಮುಖದಲ್ಲೇ ದಾಖಲೆಗಳನ್ನು ಪರಿಶೀಲಿಸಿದ್ದರು. ರಮೇಶ್ ನೀಡಿದ ಸುಳಿವು ಆಧರಿಸಿಯೇ ಅಧಿಕಾರಿಗಳು ಸಾಕಷ್ಟು ಮಾಹಿತಿ ಕಲೆಹಾಕಿದ್ದರು. ಅಲ್ಲದೆ, ಈ ಆಪ್ತ ಸಹಾಯಕನ ಮನೆಯ ಮೇಲೂ ಐ.ಟಿ ದಾಳಿ ಮಾಡಿತ್ತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಪತಿಯ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಜೊತೆ ಸ್ಥಳಕ್ಕೆ ದೌಡಾಯಿಸಿದ ಪತ್ನಿಸೌಮ್ಯಾ ಅವರ ರೋದನೆ ಕರುಳು ಹಿಂಡುವಂತಿತ್ತು.

ಸುದ್ದಿಗಾರರ ಜೊತೆ ಮಾತನಾಡಿದ ಸೌಮ್ಯಾ, ‘ಸಾಹೇಬ್ರ (ಪರಮೇಶ್ವರ) ಮನೆಗೆ ಹೋಗಿಬರುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ
ತೆರಳಿದ್ದರು. ಅದಾದ ಐದು–ಹತ್ತು ನಿಮಿಷದಲ್ಲಿ ಕರೆ ಮಾಡಿದ್ದೆ. ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸಾಹೇಬ್ರ ಮನೆಯಲ್ಲಿ ಇರಬಹು
ದೆಂದು ಸುಮ್ಮನಾದೆ. ಗಂಟೆ ನಂತರ ಆತ್ಮಹತ್ಯೆ ಸುದ್ದಿ ಬಂತು’ ಎಂದರು.

‘ಐ.ಟಿ ಅಧಿಕಾರಿಗಳು ನಮ್ಮ ಮನೆ ಮೇಲೂ ದಾಳಿ ಮಾಡಿದ್ದರು. ಇಷ್ಟೊಂದು ದಾಳಿ ನಡೆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನಗೆ ಮಾನಮರ್ಯಾದೆ ಮುಖ್ಯ. ನಾನು ಏನಾದರೂ ಮಾಹಿತಿ ನೀಡಿದರೆ ನನ್ನ ಹಿಂದೆಯೇ ಸಾಹೇಬ್ರು, ಶಾಸಕರು ಹಾಗೂ ಅಧಿಕಾರಿಗಳು ಬರ್ತಾರೆ. ಅವರೆಲ್ಲ ಒಳ್ಳೆಯವರು. ನನ್ನಿಂದ ಅವರಿಗೆ ತೊಂದರೆ ಆಗಬಾರದು’ ಎಂಬುದಾಗಿ ಪತಿ ಹೇಳಿದ್ದರು ಎಂದು ಸೌಮ್ಯಾ ತಿಳಿಸಿದರು.

ಹೆಂಡತಿ, ಮಕ್ಕಳಿಗೆ ತೊಂದರೆ ಕೊಡಬೇಡಿ: ರಮೇಶ್ ಪತ್ರ

‘ಎಲ್ಲರಿಗೂ ನಮಸ್ಕಾರ, ಮೊನ್ನೆ ನನ್ನ ಮನೆಯಲ್ಲಿ ನಡೆದ ಐ.ಟಿ ದಾಳಿಯಿಂದ ನಾನು ದಿಗ್ಭ್ರಾಂತ ಆಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಐ.ಟಿ ಅಧಿಕಾರಿಗಳೇ, ನನ್ನ ಹೆಂಡತಿ, ಮಕ್ಕಳಿಗೆ ತೊಂದರೆ ಕೊಡಬೇಡಿ’

‘ಸೌಮ್ಯಾ (ಪತ್ನಿ) ನನ್ನನ್ನು ಕ್ಷಮಿಸು. ಮಕ್ಕಳನ್ನು ಚೆನ್ನಾಗಿ ನೋಡಿಕೊ. ಲಕ್ಷ್ಮಿದೇವಿ, ಪದ್ಮಾ, ಸತೀಶ್ ನಾನು ನಿಮ್ಮೊಂದಿಗೆ ಹುಟ್ಟಿ, ನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ.’

‘ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿಎಸ್ಎಸ್ ಶಾಲೆಯವರಿಗೆ, ಮುಖ್ಯಸ್ಥರಿಗೆ ಕೃತಜ್ಞನಾಗಿದ್ದೇನೆ. ಅಪ್ಪ–ಅಮ್ಮ ನಿಮ್ಮನ್ನು ಚೆನ್ನಾಗಿ ಸಾಕಬೇಕೆಂದು ನಾನು ಅಂದುಕೊಂಡಿದ್ದೆ. ಈಗ ಬಿಟ್ಟು ಹೋಗುತ್ತಿದ್ದೇನೆ. ಕ್ಷಮಿಸಿ...’

ಪರಮೇಶ್ವರ– ರಮೇಶ್ ಮುಖಾಮುಖಿ ವಿಚಾರಣೆ

‘ಪರಮೇಶ್ವರ ಅವರ ಮನೆಯಲ್ಲಿ ಐ.ಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದ ವೇಳೆಯಲ್ಲಿ ರಮೇಶ್ ಸಹ ಇದ್ದರು. ಪ್ರತಿಯೊಂದು ವ್ಯವಹಾರ ಹಾಗೂ ದಾಖಲೆ ಬಗ್ಗೆ ಐ.ಟಿ ಅಧಿಕಾರಿಗಳು ರಮೇಶ್ ಅವರನ್ನೇ ಹೆಚ್ಚು ಪ್ರಶ್ನೆ ಕೇಳಿದ್ದರು. ಪರಮೇಶ್ವರ ಹಾಗೂ ರಮೇಶ್ ಅವರನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪರಮೇಶ್ ಅವರ ಬೇನಾಮಿ ವ್ಯವಹಾರ, ಶಾಸಕರ ಜೊತೆಗೆ ಪತ್ರ ವ್ಯವಹಾರ, ವೈದ್ಯಕೀಯ ಕಾಲೇಜಿನ ಸೀಟುಗಳ ಮಾರಾಟ ಸೇರಿದಂತೆ ಹಲವು ಮಾಹಿತಿ ರಮೇಶ್‌ ಅವರಿಗೆ ಗೊತ್ತಿತ್ತು. ಅದನ್ನು ತಿಳಿದುಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಪರಮೇಶ್ವರ ಅವರ ಎದುರೇ ಅಧಿಕಾರಿಗಳಿಗೆ ರಮೇಶ್ ಮಾಹಿತಿ ನೀಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಸಾಕಷ್ಟು ಆಸ್ತಿ ಸಂಪಾದಿಸಿದ್ದರು’

ರಾಮನಗರ: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ (36) ರಾಮನಗರ ತಾಲ್ಲೂಕಿನ ಮೆಳೇಹಳ್ಳಿ ಗ್ರಾಮದವರು. ಎಸ್ಸೆಸ್ಸೆಲ್ಸಿಯಷ್ಟೇ ಓದಿದರೂ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದರು.

ತಂದೆ ಸಂಪಂಗಯ್ಯ, ತಾಯಿ ಸಾವಿತ್ರಮ್ಮ ಊರಿನಲ್ಲಿದ್ದರು.

ವಿಧಾನಸೌಧದ ಬಳಿ ಟೈಪಿಂಗ್ ಕೆಲಸ ಮಾಡುತ್ತಿದ್ದ ರಮೇಶ್ ಅವರನ್ನು ಸಹೋದರ ಸತೀಶ್ ಅವರೇ ಕೆಪಿಸಿಸಿ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಸೇರಿಸಿದ್ದರು. ಅಲ್ಲಿಯೇ ಅವರು ಪರಮೇಶ್ವರ ಅವರಿಗೆ ಪರಿಚಯವಾಗಿದ್ದರು.

ಚನ್ನಪಟ್ಟಣದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಿಸಿದ್ದ ರಮೇಶ್, ಈಚೆಗೆ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲ್ಯಾಟ್‌ ಖರೀದಿ‌ ಮಾಡಿದ್ದರು ಎನ್ನಲಾಗಿದೆ.

ರಮೇಶ್ ಸಾವಿನ ಸುದ್ದಿ ತಿಳಿಯುತ್ತಲೇ ಅವರ ನಿವಾಸದ ಎದುರು ಜನರು ಗುಂಪಾಗಿ ಸೇರಿದ್ದರು. ತಂದೆ ಸಂಪಂಗಯ್ಯ ಅಸ್ವಸ್ಥಗೊಂಡು ಮನೆಯಲ್ಲೇ ಕುಸಿದು ಬಿದ್ದರು.

ಗೆಳೆಯನಿಗೆ ಕೊನೆಯ ಕರೆ

ಬೆಂಗಳೂರು: ‘ ಬೆಳಿಗ್ಗೆ 9 ಗಂಟೆಗೆ ಕಾರಿನಲ್ಲಿ ಮನೆಯಿಂದ ಹೊರಟಿದ್ದ ರಮೇಶ್, ಜ್ಞಾನಭಾರತಿ ಕ್ಯಾಂಪಸ್‌ನ ಸಾಯ್‌ ಮೈದಾನ ರಸ್ತೆಯಲ್ಲಿ ಕಾರು ನಿಲ್ಲಿಸಿ ಸ್ನೇಹಿತನಿಗೆ ಕರೆ ಮಾಡಿದ್ದರು. ‘ನಾನು ನಿಯತ್ತಿನಿಂದ ಬದುಕಿದ್ದೇನೆ. ಈಗ ಮನೆ ಕಟ್ಟಿಸ್ತಾ ಇದ್ದೇನೆ. ನನ್ನ ಮನೆ ಮೇಲೂ ದಾಳಿ ಆಗಿದೆ. ಐ.ಟಿಯವರು ಅನ್ಯಾಯ ಮಾಡುತ್ತಿದ್ದಾರೆ. ಅವರ ವಿಚಾರಣೆ ಎದುರಿಸುವ ಶಕ್ತಿ ನನಗಿಲ್ಲ. ಅವರು ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ. ಈಗ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇನೆ’ ಎಂದು ಕರೆ ಕಡಿತ ಮಾಡಿ ಮೊಬೈಲ್‌ ಸ್ವಿಚ್ ಆಫ್ ಮಾಡಿದ್ದರು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.