ADVERTISEMENT

ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣ | ಬಿಜೆಪಿ ಕಚೇರಿ ಸ್ಫೋಟಕ್ಕೆ ಯತ್ನ: ಎನ್‌ಐಎ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 19:51 IST
Last Updated 9 ಸೆಪ್ಟೆಂಬರ್ 2024, 19:51 IST
   

ಬೆಂಗಳೂರು: ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದ ಶಂಕಿತ ಉಗ್ರರು ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ದಿನವೇ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿ ಸ್ಫೋಟಕ್ಕೆ ವಿಫಲ ಯತ್ನ ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮುಸ್ಸಾವೀರ್‌ ಹುಸೇನ್‌ ಶಾಜೀಬ್‌, ಅಬ್ದುಲ್‌ ಮಥೀನ್‌ ಅಹ್ಮದ್‌ ತಾಹಾ, ಮಾಜ್‌ ಮುನೀರ್‌ ಅಹ್ಮದ್ ಮತ್ತು ಮುಝಮಿಲ್‌ ಷರೀಫ್‌ ಎಂಬ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಎನ್‌ಐಎ ಈ ವಿಷಯವನ್ನು ಉಲ್ಲೇಖಿಸಿದೆ.

‘ತಾಹಾ ಮತ್ತು ಶಾಜೀಬ್‌ಗೆ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಕ್ರಿಪ್ಟೋ ಕರೆನ್ಸಿ ಮೂಲಕ ಆರ್ಥಿಕ ನೆರವು ನೀಡುತ್ತಿದ್ದರು. ಟೆಲಿಗ್ರಾಂ ಆ್ಯಪ್‌ ಆಧಾರಿತ ‘ಪಿಯರ್‌ ಟು ಪಿಯರ್‌’ ವೇದಿಕೆಗಳನ್ನು ಬಳಸಿಕೊಂಡು ತಾಹಾ ಕ್ರಿಪ್ಟೋ ಕರೆನ್ಸಿಯನ್ನು ಸಾಮಾನ್ಯ ಕರೆನ್ಸಿಯನ್ನಾಗಿ ಬದಲಾವಣೆ ಮಾಡುತ್ತಿದ್ದ. ಈ ಹಣವನ್ನು ಬೆಂಗಳೂರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುವುದಕ್ಕೆ ತಯಾರಿಗಾಗಿ ಬಳಸುತ್ತಿದ್ದ’ ಎಂದೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾದ 2024ರ ಜನವರಿ 22ರಂದೇ ಕಚ್ಚಾ ಬಾಂಬ್ ಬಳಸಿ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿ ಸ್ಫೋಟಿಸಲು ಆರೋಪಿಗಳು ನಡೆಸಿದ್ದ ಯತ್ನ ವಿಫಲವಾಗಿತ್ತು. ಆ ಬಳಿಕ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು’ ಎಂದು ಎನ್‌ಐಎ, ನ್ಯಾಯಾಲಯಕ್ಕೆ ತಿಳಿಸಿದೆ.

ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆ, ಸಾರ್ವಜನಿಕ ಆಸ್ತಿ ಹಾನಿ ತಡೆ (ಪಿಡಿಎಲ್‌ಪಿ) ಕಾಯ್ದೆ, ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಗಳ ಅಡಿಯಲ್ಲಿ ಎಲ್ಲ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ಹೇಳಿದೆ.

ವಿವಿಧೆಡೆ ಶೋಧ ನಡೆಸಿ, ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ್ದ ತನಿಖಾ ತಂಡ, ವಿವಿಧ ರಾಜ್ಯಗಳ ಪೊಲೀಸ್‌ ಪಡೆಗಳು ಮತ್ತು ಇತರ ತನಿಖಾ ಸಂಸ್ಥೆಗಳ ಜೊತೆಗೂಡಿ ಆರೋಪಿಗಳ ಪತ್ತೆಗೆ ಶ್ರಮಿಸಿತ್ತು. ಮುಸ್ಸಾವೀರ್‌ ಹುಸೇನ್‌ ಶಾಜೀಬ್‌, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇರಿಸಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್‌ ಹಿಂದ್ ಉಗ್ರ ಸಂಘಟನೆಯ ಚಟುವಟಿಕೆಗಳನ್ನು 2020ರಲ್ಲಿ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ ಬಳಿಕ ಶಾಜೀಬ್‌ ಮತ್ತು ಅಬ್ದುಲ್‌ ಮಥೀನ್‌ ತಾಹಾ ತಲೆಮರೆಸಿಕೊಂಡಿದ್ದರು. ಎನ್‌ಐಎ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ನಡೆದ 42 ದಿನಗಳ ಬಳಿಕ ಈ ಇಬ್ಬರನ್ನೂ ಪಶ್ಚಿಮ ಬಂಗಾಳದ ಅಡಗುದಾಣವೊಂದರಿಂದ ಬಂಧಿಸಿದ್ದರು ಎಂಬ ಉಲ್ಲೇಖ ಆರೋಪ ಪಟ್ಟಿಯಲ್ಲಿದೆ.

‘ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಮುಸ್ಸಾವೀರ್ ಹುಸೇನ್‌ ಮತ್ತು ಅಬ್ದುಲ್‌ ಮಥೀನ್‌, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆಯ ಜತೆ ನಂಟು ಹೊಂದಿದ್ದರು. ಸಿರಿಯಾದಲ್ಲಿ ಐಎಸ್‌ ವಶದಲ್ಲಿರುವ ಪ್ರದೇಶಕ್ಕೆ ವಲಸೆ ಹೋಗಲು ಈ ಹಿಂದೆ ಪ್ರಯತ್ನಿಸಿದ್ದರು. ಅಮಾಯಕ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಐಎಸ್‌ ಸಿದ್ಧಾಂತದತ್ತ ಸೆಳೆಯುವ ಕೆಲಸ ಮಾಡುತ್ತಿದ್ದರು. ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದಲ್ಲಿ ಬಂಧಿತರಾಗಿರುವ ಮಾಜ್‌ ಮುನೀರ್‌ ಅಹ್ಮದ್ ಮತ್ತು ಮುಝಮ್ಮಿಲ್‌ ಷರೀಫ್ ಕೂಡ ಅದೇ ರೀತಿ ಈ ಇಬ್ಬರಿಂದ ಪ್ರಚೋದಿತರಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದೆ.

ಮುಸ್ಸಾವೀರ್ ಹುಸೇನ್‌ ಮತ್ತು ಅಬ್ದುಲ್‌ ಮಥೀನ್‌ ವಂಚನೆಯಿಂದ ಭಾರತೀಯ ಸಿಮ್‌ ಕಾರ್ಡ್‌ಗಳನ್ನು ಪಡೆದು ಬಳಸುತ್ತಿದ್ದರು. ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದರು. ಭಾರತೀಯರು ಮತ್ತು ಬಾಂಗ್ಲಾದೇಶಿ ಪ್ರಜೆಗಳಿಗೆ ಸಂಬಂಧಿಸಿದ ಗುರುತಿನ ದಾಖಲೆಗಳನ್ನು ಡಾರ್ಕ್‌ ವೆಬ್‌ನಿಂದ ಡೌನ್‌ಲೋಡ್‌ ಮಾಡಿ ಇರಿಸಿಕೊಂಡಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.

ಶಂಕಿತ ಉಗ್ರರ ನಂಟಿನ ಸರಣಿ
‘ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಶೋಯಬ್‌ ಅಹ್ಮದ್ ಮಿರ್ಝಾ ಎಂಬಾತ ಅಬ್ದುಲ್‌ ಮಥೀನ್‌ ತಾಹಾನನ್ನು ಲಷ್ಕರ್–ಎ–ತಯಬಾ ಉಗ್ರ ಸಂಘಟನೆಯು ಬೆಂಗಳೂರು ಬಾಂಬ್‌ ಸ್ಫೋಟಕ್ಕೆ ನಡೆಸಿದ ಸಂಚಿನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಶಾಹೀದ್‌ ಫೈಸಲ್‌ ಎಂಬಾತನಿಗೆ ಪರಿಚಯಿಸಿದ್ದ. ತನ್ನ ‘ಹ್ಯಾಂಡ್ಲರ್‌’ ಆಗಿದ್ದ ಫೈಸಲ್‌ನನ್ನು ನಂತರದ ದಿನಗಳಲ್ಲಿ ತಾಹಾ, ಅಲ್‌ ಹಿಂದ್‌ ಐಎಸ್‌ ಭಯೋತ್ಪಾದನಾ ಚಟುವಟಿಕೆ ಪ್ರಕರಣದ ಆರೋಪಿ ಮೆಹಬೂಬ್‌ ಪಾಷಾ ಎಂಬಾತನಿಗೆ ಪರಿಚಯಿಸಿದ್ದ. ದಕ್ಷಿಣ ಭಾರತದಲ್ಲಿ ಐಎಸ್‌ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದ ಖಾಜಾ ಮೊಹಿದ್ದೀನ್‌ ಮತ್ತು ಅಮೀರ್‌ ಎಂಬುವವರಿಗೂ ಪರಿಚಯಿಸಿದ್ದ. ಕೊನೆಯಲ್ಲಿ ಫೈಸಲ್‌ನನ್ನು ಮಾಜ್ ಮುನೀರ್‌ ಅಹ್ಮದ್‌ಗೂ ಪರಿಚಯಿಸಿದ್ದ’ ಎಂದು ಎನ್‌ಐಎ ಆರೋಪಪಟ್ಟಿ ಹೇಳಿದೆ.

ಶಂಕಿತರ ಹೆಜ್ಜೆ ಗುರುತುಗಳು

  • 2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ. ಅದೇ ದಿನ ಬಾಂಬ್ ಸ್ಫೋಟಿಸುವ ಶಂಕಿತ ಉಗ್ರರ ಸಂಚು ವಿಫಲ

  • ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರಂದು ಕಚ್ಚಾ ಬಾಂಬ್‌ ಸ್ಫೋಟ

  • ಒಂಬತ್ತು ಮಂದಿಗೆ ತೀವ್ರ ಗಾಯ ಹಾಗೂ ಹೋಟೆಲ್‌ನ ಆಸ್ತಿಗಳಿಗೆ ಭಾರಿ ಹಾನಿ

  • ಮಾರ್ಚ್ 3ರಂದು ಪ್ರಕರಣದ ತನಿಖೆ ಎನ್‌ಐಎಗೆ ವರ್ಗಾವಣೆ

  • ಏಪ್ರಿಲ್‌ 12ರಂದು ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯಲ್ಲಿ ತೀರ್ಥಹಳ್ಳಿಯ ಮುಸಾವೀರ್‌ ಹುಸೇನ್‌ ಮತ್ತು ಅಬ್ದುಲ್‌ ಮಥೀನ್ ತಾಹಾ ಬಂಧನ

  • ಮತ್ತೊಬ್ಬ ಆರೋಪಿ ಮುಝಮ್ಮಿಲ್‌ ಷರೀಫ್‌ ಸೇರಿ ಈ ಪ್ರಕರಣದಲ್ಲಿ ನಾಲ್ವರ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.