ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಗುಡುಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2024, 14:08 IST
Last Updated 1 ಮಾರ್ಚ್ 2024, 14:08 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಘಟನೆಯನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ವಿಧಾನಸೌಧದಿಂದ ಹೊರಕಳಿಸುವ ದಾರಿ ತೋರಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ ಎಂದು ಅವರು ಗುಡುಗಿದ್ದಾರೆ.

ADVERTISEMENT

ಈ ಬಗ್ಗೆ ‘ಎಕ್ಸ್‌’ನಲ್ಲಿ ಅವರು ಬರೆದುಕೊಂಡಿದ್ದಾರೆ.

‘ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಘಟನೆ ರಾಜಧಾನಿಯ ಜನರನ್ನು ಬೆಚ್ಚಿಬೀಳಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ’ ಎಂದು ಅವರು ಹೇಳಿದ್ದಾರೆ.

‘ಕೊಲೆ, ಸುಲಿಗೆ, ಗೂಂಡಾಗಿರಿ, ಮಹಿಳಾ ದೌರ್ಜನ್ಯಗಳು ಸರಣಿ ರೂಪದಲ್ಲಿ ವರದಿಯಾಗುತ್ತಲೇ ಇವೆ. ದೇಶ ಕಂಟಕ ಶಕ್ತಿಗಳು ವಿಧಾನಸೌಧದೊಳಗೇ ಬಂದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವಷ್ಟರ ಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಜನನಿಬಿಡ ಹೋಟೆಲ್ ಪ್ರವೇಶಿಸಿ ಬಾಂಬ್ ಸ್ಫೋಟಿಸಿ ಅಮಾಯಕರನ್ನು ಗಾಯಗೊಳಿಸಿ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದೆ’ ಎಂದು ಅವರು ಬರೆದುಕೊಂದಿದ್ದಾರೆ.

‘ಸುಭದ್ರ ಕರ್ನಾಟಕಕ್ಕೆ ಗಂಡಾಂತರದ ಆತಂಕ ತರುವ ಚಟುವಟಿಕೆಗಳನ್ನು ಬಗ್ಗುಬಡಿಯುವಲ್ಲಿ ಮೀನಾಮೇಷ ಎಣಿಸುತ್ತಾ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ ಲೆಕ್ಕಾಚಾರದ ಹೆಜ್ಜೆಗಳ ದಾರಿ ಬದಲಿಸಿಕೊಳ್ಳದೇ ಹೋದರೆ, ಅಧಿಕಾರದಿಂದ ಕೆಳಗಿಳಿಸಿ ವಿಧಾನಸೌಧದಿಂದ ಹೊರಕಳಿಸುವ ದಾರಿ ತೋರಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.