ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ: ಸಂಘಟನೆ ಕೈವಾಡ

ರಾಮೇಶ್ವರಂ ಕೆಫೆಗೆ ಎನ್‌ಎಸ್‌ಜಿ ಕಮಾಂಡೊ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
<div class="paragraphs"><p>ಬಾಂಬ್ ಸ್ಫೋಟ ನಡೆದಿದ್ದ ಸ್ಥಳ ಹಾಗೂ ಸುತ್ತಮುತ್ತ ಎನ್‌ಎಸ್‌ಜಿ ಕಮಾಂಡೊಗಳು ಶನಿವಾರ ಪರಿಶೀಲನೆ ನಡೆಸಿದರು – ಪ್ರಜಾವಾಣಿ ಚಿತ್ರ</p></div>

ಬಾಂಬ್ ಸ್ಫೋಟ ನಡೆದಿದ್ದ ಸ್ಥಳ ಹಾಗೂ ಸುತ್ತಮುತ್ತ ಎನ್‌ಎಸ್‌ಜಿ ಕಮಾಂಡೊಗಳು ಶನಿವಾರ ಪರಿಶೀಲನೆ ನಡೆಸಿದರು – ಪ್ರಜಾವಾಣಿ ಚಿತ್ರ

   

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ನಿಷೇಧಿತ ಸಂಘಟನೆಯೊಂದರ ಕೈವಾಡ ವಿರುವ ಶಂಕೆ ವ್ಯಕ್ತವಾಗಿದೆ. ಆ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ ವಿಶೇಷ ತಂಡದ ಪೊಲೀಸರು, ನಾಲ್ವರನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಕೆಫೆ ಸ್ಥಳದಲ್ಲಿ ಸಿಕ್ಕಿರುವ ಕಚ್ಚಾ ಬಾಂಬ್ (ಐಇಡಿ) ವಸ್ತುಗಳು ಹಾಗೂ ಈ ಹಿಂದೆ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆದಿದ್ದ ಸ್ಥಳದಲ್ಲಿ ದೊರಕಿದ್ದ ವಸ್ತುಗಳಿಗೂ ಹೋಲಿಕೆಯಾಗುತ್ತಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಸಂಘಟನೆಯೊಂದರ ಪ್ರಚೋದನೆಯಿಂದ 30 ವರ್ಷದಿಂದ 35 ವರ್ಷ ವಯಸ್ಸಿನ ಶಂಕಿತ, ಕಚ್ಚಾ ಬಾಂಬ್ ತಯಾರಿಸಿ ಕೆಫೆಯಲ್ಲಿ ಇಟ್ಟು ಹೋಗಿರುವ ಅನುಮಾನ ದಟ್ಟವಾಗಿದೆ.

ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಸಿಬ್ಬಂದಿ) ಬಾಂಬ್ ನಿಷ್ಕ್ರಿಯ ದಳದ ಮೂವರು ಕಮಾಂಡೊಗಳು, ಸ್ಫೋಟ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದರು. ಕೆಫೆಯ ಪ್ರತಿಯೊಂದು ಸ್ಥಳದ ಫೋಟೊ ಕ್ಲಿಕ್ಕಿಸಿಕೊಂಡರು. ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು. ಸಂಘಟನೆಯೊಂದರ ಕೈವಾಡವಿರುವುದರಿಂದಲೇ ಎನ್‌ಎಸ್‌ಜಿ ಕಮಾಂಡೊಗಳು ಪರಿಶೀಲನೆಗೆ ಬಂದಿದ್ದಾರೆಂದು ಗೊತ್ತಾಗಿದೆ.

‘ಕೆಫೆಯಲ್ಲಿ ಶಂಕಿತನೊಬ್ಬ ಇಟ್ಟುಹೋಗಿದ್ದ ಬ್ಯಾಗ್‌ನಲ್ಲಿ ಬಾಂಬ್ ಇತ್ತು. ಅದೇ ಬ್ಯಾಗ್ ಸ್ಫೋಟಗೊಂಡಿದೆ. ಸ್ಫೋಟಕ್ಕೂ ಒಂದು ಗಂಟೆ ಮುನ್ನವೇ ಶಂಕಿತ ಸ್ಥಳದಿಂದ ಹೊರಟು ಹೋಗಿದ್ದಾನೆ. ಈತ ಯಾರು? ಎಲ್ಲಿಂದ ಬಂದಿದ್ದ? ಎಲ್ಲಿಗೆ ಹೋದ? ಎಂಬುದನ್ನು ಪತ್ತೆ ಮಾಡಲು ಸಿ.ಸಿ.ಸಿ.ಟಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅನುಮಾನದ ಮೇರೆಗೆ ನಾಲ್ವರು ಯುವಕರನ್ನು ವಶಕ್ಕೆ ಪಡೆಯಲಾಗಿತ್ತು. ಇವರಲ್ಲಿ ಒಬ್ಬನನ್ನು ಬಿಟ್ಟು ಕಳುಹಿಸಲಾಗಿದೆ. ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇವರಿಂದ ಶಂಕಿತನ ಬಗ್ಗೆ ಏನಾದರೂ ಸುಳಿವು ಸಿಗಬಹುದೆಂಬ ನಿರೀಕ್ಷೆ ಇದೆ’ ಎಂದು ತಿಳಿಸಿದರು.

400 ಕ್ಯಾಮೆರಾ ಪರಿಶೀಲನೆ: ‘ದಿ ರಾಮೇಶ್ವರಂ ಕೆಫೆ ಹಾಗೂ ಅಕ್ಕ–ಪಕ್ಕದ ಮಳಿಗೆಗಳು, ಐಟಿಪಿಎಲ್ ಮುಖ್ಯರಸ್ತೆ, ಕುಂದಲಹಳ್ಳಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿರುವ 400ಕ್ಕೂ ಹೆಚ್ಚು ಕ್ಯಾಮೆರಾಗಳ ಡಿವಿಆರ್‌ಗಳನ್ನು ಸುಪರ್ದಿಗೆ ಪಡೆದು, ಎಲ್ಲ ವಿಡಿಯೊ ವೀಕ್ಷಿಸಲಾಗುತ್ತಿದೆ. ಶಂಕಿತ ಓಡಾಡಿದ್ದ ಕೆಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಶಂಕಿತ ಮಾಸ್ಕ್ ಹಾಗೂ ಕ್ಯಾಪ್‌ ಧರಿಸಿದ್ದ. ಕನ್ನಡಕ ಹಾಕಿಕೊಂಡಿದ್ದ. ಕ್ಯಾಪ್‌ ಮೇಲೆ ‘10’ ಸಂಖ್ಯೆ ಬರೆಯಲಾಗಿತ್ತು. ಆಗಾಗ ಕೈ ಗಡಿಯಾರ ನೋಡಿಕೊಂಡು ರಸ್ತೆಯಲ್ಲಿ ಹೊರಟಿದ್ದ. ಕೆಫೆಯಲ್ಲಿದ್ದ ವೇಳೆ, ಇಡ್ಲಿ ಪ್ಲೇಟ್ ತೆಗೆದುಕೊಂಡು ಹೋಗಿ ಕಟ್ಟೆ ಮೇಲೆ ಕುಳಿತು ತಿಂದಿದ್ದ. ಈ ಸಂದರ್ಭದಲ್ಲಿ ಆಗಾಗ ಮೊಬೈಲ್ ನೋಡಿಕೊಂಡಿದ್ದ. ಈ ಎಲ್ಲ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ’ ಎಂದು ಹೇಳಿದರು.

ಬಸ್‌ನಲ್ಲಿ ಪ್ರಯಾಣ:
‘ಕುಂದಲಹಳ್ಳಿ ಬಳಿ ಬ್ಯಾಗ್ ಹಿಡಿದು ನಿಂತಿದ್ದ ಶಂಕಿತ, ಬನಶಂಕರಿಯಿಂದ ಐಟಿಪಿಎಲ್‌ನತ್ತ ಹೊರಟಿದ್ದ ಬಿಎಂಟಿಸಿ ಬಸ್ ಹತ್ತಿದ್ದ. ಸಿಎಂಆರ್‌ಐಟಿ ಕಾಲೇಜು ತಂಗುದಾಣ ದಲ್ಲಿ ಇಳಿದಿದ್ದ. ನಂತರ, ಅಲ್ಲಿಂದ ನಡೆದುಕೊಂಡು ದಿ ರಾಮೇಶ್ವರಂ ಕೆಫೆಗೆ ಹೋಗಿದ್ದ. ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಂದ ಮಾಹಿತಿ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ. ಎಂಟು ಪ್ರತ್ಯೇಕ ತಂಡಗಳು ಮಾಹಿತಿ ಕಲೆಹಾಕುತ್ತಿವೆ. ತಮಿಳುನಾಡು, ಕೇರಳಕ್ಕೂ ಪೊಲೀಸರು ಹೋಗಿದ್ದಾರೆ’ ಎಂದು ಅಧಿಕಾರಿ ಹೇಳಿದರು.

ಶಂಕಿತನನ್ನು ನೋಡಿದ್ದ ವ್ಯವಸ್ಥಾಪಕ:
ಸ್ಫೋಟದ ಬಗ್ಗೆ ಕೆಫೆಯ ಮೇಲ್ವಿಚಾರಕ ರಾಜೇಶ್ ಅವರು ದೂರು ನೀಡಿದ್ದಾರೆ. ಅಪರಾಧಿಕ ಸಂಚು, ಹಲ್ಲೆ, ಕೊಲೆಗೆ ಯತ್ನ ಆರೋಪ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಎಚ್‌ಎಎಲ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 1 ಗಂಟೆಯವರೆಗೂ ಹೋಟೆಲ್ ತೆರೆದಿರುತ್ತದೆ. ಫೆ. 1ರಂದು ಮಧ್ಯಾಹ್ನ 12.50 ಗಂಟೆಯಿಂದ 1 ಗಂಟೆ ಅವಧಿಯೊಳಗೆ, ತಟ್ಟೆಗಳನ್ನು ಇರಿಸುವ ಜಾಗದ ಪಕ್ಕದಲ್ಲಿರುವ ಕಟ್ಟೆ ಮೇಲೆ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ದೊಡ್ಡ ಶಬ್ದ ಬಂದಿತ್ತು. ಹೋಟೆಲ್‌ನ ಕಬ್ಬಿಣದ ಚಾವಣಿ ಜಖಂಗೊಂಡಿತು. ಗಾಜುಗಳು ಒಡೆದವು. ಟಾರ್ಪಲ್ ಶೆಲ್ಟರ್ ಹರಿದು ಹೋಯಿತು. ಸ್ಥಳದಲ್ಲಿ ನಟ್, ಬೋಲ್ಟ್, ವಾಷರ್‌ಗಳು ಬಿದ್ದಿದ್ದವು. ಹೆಚ್ಚು ಜನ ಸೇರುವ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿ ಸಾರ್ವಜನಿಕರನ್ನು ಕೊಲ್ಲುವ ಉದ್ದೇಶದಿಂದ ದುಷ್ಕರ್ಮಿಗಳು ಬಾಂಬ್ ಇಟ್ಟಿದ್ದಾರೆ. ಹೋಟೆಲ್‌ನ ವ್ಯವಸ್ಥಾಪಕ ಹರಿಹರನ್, ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಶಂಕಿತನನ್ನು ನೋಡಿದ್ದರು’ ಎಂದು ರಾಜೇಶ್ ದೂರಿನಲ್ಲಿ
ಉಲ್ಲೇಖಿಸಿದ್ದಾರೆ.

‘ಪರಿಣತರಿಂದ ಬಾಂಬ್ ತಯಾರಿ’
‘ಸ್ಫೋಟದ ಸ್ಥಳದಲ್ಲಿ ಸಿಕ್ಕಿರುವ ಕಚ್ಚಾ ವಸ್ತುಗಳನ್ನು ಗಮನಿಸಿದರೆ, ಪರಿಣತರು ಬಾಂಬ್ ತಯಾರಿಸುವ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಜೈಲಿನಲ್ಲಿರುವ ಶಂಕಿತ ಉಗ್ರರು ಹಾಗೂ ನಿಷೇಧಿತ ಸಂಘಟನೆಗಳ ಸದಸ್ಯರ ಚಲನವಲನಗಳ ಬಗ್ಗೆಯೂ ನಿಗಾ ವಹಿಸಲಾಗಿದೆ’ ಎಂದು ತಿಳಿಸಿವೆ.
‘‌‌ಮೇಲ್ಭಾಗಕ್ಕೆ ಸಿಡಿದ ಬಾಂಬ್: ತಪ್ಪಿದ ದೊಡ್ಡ ಅನಾಹುತ’
ಬಾಂಬ್ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಸಿಸಿಬಿ ಪೊಲೀಸರ ಜೊತೆ ಪ್ರಾಥಮಿಕ ವರದಿ ಹಂಚಿಕೊಂಡಿದ್ದಾರೆ. ‘9 ವೋಲ್ಟ್ ಬ್ಯಾಟರಿ, ಮೊಬೈಲ್ ಸರ್ಕೀಟ್, ಟೈಮರ್ ಹಾಗೂ ಇತರೆ ಕಚ್ಚಾ ಸಾಮಗ್ರಿಗಳನ್ನು ಬಳಸಿ ಬಾಂಬ್ ತಯಾರಿಸಲಾಗಿದೆ. ಇದು ಹೆಚ್ಚು ತೀವ್ರತೆ ಇರುವ ಬಾಂಬ್. ಕೆಫೆಯಲ್ಲಿ ಮೇಲ್ಭಾಗದ ಕಡೆಗೆ ಬಾಂಬ್ ಸಿಡಿದಿದ್ದರಿಂದ ಹಾರಿದ್ದರಿಂದ, ಅಕ್ಕ–ಪಕ್ಕದಲ್ಲಿ ತೀವ್ರತೆ ಕಡಿಮೆ ಇತ್ತು. ಆಕಸ್ಮಾತ್, ಅಕ್ಕ–ಪಕ್ಕಕ್ಕೆ ಬಾಂಬ್ ಸಿಡಿದಿದ್ದರಿಂದ ದೊಡ್ಡ ಅನಾಹುತ ನಡೆಯುವ ಸಾಧ್ಯತೆ ಹೆಚ್ಚಿತ್ತು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಬೆಂಗಳೂರಿನಲ್ಲಿ ಕಟ್ಟೆಚ್ಚರ: ತಪಾಸಣೆ’
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲು ನಿಲ್ದಾಣ, ಬಸ್‌ ತಂಗುದಾಣಗಳು ಹಾಗೂ ಜನರು ಹೆಚ್ಚು ಸೇರುವ ಸ್ಥಳಗಳಲ್ಲಿ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಶನಿವಾರ ತಪಾಸಣೆ ನಡೆಸಿದರು. ಮೆಜೆಸ್ಟಿಕ್, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಹಾಗೂ ಇತರೆಡೆ ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.