ಹಳಿಯಾಳ: ಪಟ್ಟಣದ ಮರಡಿಗುಡ್ಡದಲ್ಲಿ ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಶುಭಾಶಯ ಕೋರಲು ತೆರಳಿದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಗೆ ಅಂಜುಮನ್ ಆಡಳಿತ ಅಧಿಕಾರಿ ಆದಂ ಸಾಬ್ ದೇಸಾಯಿ ಮೈಕ್ ನೀಡಲು ನಿರಾಕರಿಸಿದ್ದು ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಸಿತು.
ಮರಡಿ ಗುಡ್ಡದ ನಿಸರ್ಗ ಧಾಮದ ಹತ್ತಿರ ಇರುವ ಈದ್ಗಾ ಮೈದಾನದಲ್ಲಿ ಪ್ರತಿವರ್ಷ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತದೆ. ಹಲವು ವರ್ಷಗಳಿಂದ ಶಾಸಕ ಆರ್.ವಿ.ದೇಶಪಾಂಡೆ ಇಲ್ಲಿಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡುತ್ತಿದ್ದರು. ಈ ಬಾರಿ ಅವರಿಗೆ ಕಹಿ ಅನುಭವ ಎದುರಾಯಿತು.
ಶನಿವಾರ ಎಂದಿನಂತೆ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಸಮುದಾಯದವರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪ್ರಾರ್ಥನೆ ನಂತರ ಶುಭ ಸಂದೇಶ ಕೋರುವ ಸಂದರ್ಭದಲ್ಲಿ ಕೆಲ ಮುಸ್ಲಿಂ ಮುಖಂಡರು ದೇಶಪಾಂಡೆ ಅವರಿಗೆ ಮಾತನಾಡಲು ಅಡ್ಡಿಪಡಿಸಿದರು. ದೇಶಪಾಂಡೆ ಕೈಯಲಿದ್ದ ಮೈಕ್‍ನ್ನು ಅಂಜುಮನ್ ಸಂಸ್ಥೆಯ ಆಡಳಿತಾಧಿಕಾರಿ ಕಸಿದ ಕಾರಣ ಕೆಲ ಮುಸ್ಲಿಂ ಮುಖಂಡರು ಹಾಗೂ ಆಡಳಿತ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಹಿರಿಯ ಮುಸ್ಲಿಂ ಮುಖಂಡರು ಪ್ರಾರ್ಥನೆಯನ್ನು ಮೊಟಕುಗೊಳಿಸಿ ತೆರಳಿದರು.
ಘಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಅಜರ್ ಬಸರಿಕಟ್ಟಿ, ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ದೇಶಪಾಂಡೆ ಅವರಿಗೆ ಸಾಮೂಹಿಕ ಪ್ರಾರ್ಥನೆ ನಂತರ ಮಾತನಾಡಲು ಅವಕಾಶ ನೀಡಲಿಲ್ಲ. ಆದರೆ ಆರ್.ವಿ.ದೇಶಪಾಂಡೆ ಚುನಾವಣಾ ಪ್ರಚಾರ ಭಾಷಣ ಮಾಡಲು ಬಂದಿರಲಿಲ್ಲ. ಶುಭಾಶಯ ಕೋರಲು ಬಂದವರಿಗೆ ನಿರಾಕರಿಸಿದ್ದು ಖೇದಕರ ಸಂಗತಿ’ ಎಂದರು.
ಆರ್.ವಿ.ದೇಶಪಾಂಡೆ, ‘ಚುನಾವಣಾ ಪ್ರಚಾರಕ್ಕೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರಲಿಲ್ಲ. ಪ್ರತಿ ವರ್ಷದಂತೆ ಈ ಸಲವೂ ಹಬ್ಬದ ಶುಭಾಶಯ ಹೇಳಲು ಬಂದಿದ್ದೆ’ ಎಂದರು.
ಘಟನೆ ನಡೆದ ಕೆಲ ಹೊತ್ತಿನ ಬಳಿಕ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ ಆಗಮಿಸಿ ಮುಸ್ಲಿಂ ಸಮುದಾಯದವರಿಗೆ ವೈಯಕ್ತಿಕವಾಗಿ ಶುಭ ಕೋರಿದರು. ಮೈಕ್ ಬಳಸಲಿಲ್ಲ.
ಚಿಕ್ಕಮಗಳೂರು | ಕಾಂಗ್ರೆಸ್ ಅಭ್ಯರ್ಥಿ ಭಾಗಿ; ಆಕ್ಷೇಪ – ವಾಗ್ವಾದ
ಈದ್ ಉಲ್ ಫಿತ್ರ್ ಅಂಗವಾಗಿ ಶನಿವಾರ ಇಲ್ಲಿಯ ಬಡಾ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ಭಾಗಿಯಾಗಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಮುಸ್ಲಿಂ ಮುಖಂಡರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಪ್ರಾರ್ಥನೆಯ ಕೊನೆಯ ಹಂತದಲ್ಲಿ ತಮ್ಮಯ್ಯ ಅವರು ಮುಖಂಡರ ಜತೆ ಸಾಮೂಹಿಕ ಪ್ರಾರ್ಥನೆಯ ವೇದಿಕೆ ಸ್ಥಳಕ್ಕೆ ಬಂದಾಗ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮಯ್ಯ ಅವರಿಗೆ ಮಾತನಾಡಲು ಅವಕಾಶ ನೀಡದಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಮುಖಂಡರ ನಡುವೆ ತಳ್ಳಾಟ ನೂಕಾಟ ನಡೆಯಿತು. ಕೆಲವರು ಪರಸ್ಪರ ಕೈಕೈ ಮಿಲಾಯಿಸಲು ಮುಂದಾದರು. ಮೈದಾನದಲ್ಲಿದ್ದ ಬಹುತೇಕರು ವಾಗ್ವಾದ ಶುರುವಾಗುತ್ತಲೇ ಹೊರಕ್ಕೆ ತೆರಳಿದರು. ಪೊಲೀಸರು ಮತ್ತು ಸಮುದಾಯದ ಕೆಲವು ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.