ಬೆಂಗಳೂರು: ‘ರಣಂ’ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ತಾಯಿ–ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸಿನಿಮಾದ ಸ್ಟಂಟ್ ಮಾಸ್ಟರ್ ಸುಭಾಷ್ (52) ಅವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
‘ಕೆಂಗೇರಿ ಬಳಿಯ ದೊಡ್ಡಬೆಲೆ ನಿವಾಸಿಯಾದ ಸುಭಾಷ್, 15 ವರ್ಷಗಳಿಂದ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ತಲೆಮರೆಸಿಕೊಂಡು ಓಡಾಡುತ್ತಿದ್ದ ಅವರು ಭಾನುವಾರ ಮನೆಗೆ ಬಂದಿದ್ದರು. ಆಗಪೊಲೀಸರ ವಿಶೇಷ ತಂಡ ಮನೆಗೆ ಹೋಗಿ ಅವರನ್ನು ಬಂಧಿಸಿದೆ’ ಎಂದು ಈಶಾನ್ಯ ವಿಭಾಗದಡಿಸಿಪಿ ಕಲಾ ಕೃಷ್ಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಣಂ’ ಸಿನಿಮಾದ ಸಾಹಸ ನಿರ್ದೇಶಕರಾಗಿರುವ ವಿಜಯನ್ ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರ ಕೈ ಕೆಳಗೆ ಸುಭಾಷ್ ಕೆಲಸ ಮಾಡುತ್ತಿದ್ದರು. ವಿಜಯನ್ ಸೂಚನೆಯಂತೆ ಕಾರು ಬೆನ್ನಟ್ಟುವ ಹಾಗೂ ಸ್ಫೋಟಿಸುವ ಜವಾಬ್ದಾರಿಯನ್ನು ಸುಭಾಷ್ ವಹಿಸಿಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.
ಸಿಲಿಂಡರ್ ಜೋಡಿಸಿದ್ದರು: ‘ಕಾರು ಸ್ಫೋಟಿಸಲು ಬೇಕಾದ ಸಿಲಿಂಡರ್ ಸೇರಿದಂತೆ ಹಲವು ಬಗೆಯ ಸಲಕರಣೆಗಳನ್ನು ಚಿತ್ರೀಕರಣದ ಸ್ಥಳಕ್ಕೆ ಸುಭಾಷ್ ತಂದಿಟ್ಟು ಸ್ಫೋಟಕ್ಕೆ ಅಣಿಯಾಗಿದ್ದರು. ನಿಗದಿತ ಸಮಯಕ್ಕೂ ಮುನ್ನವೇ ಸ್ಫೋಟಗೊಂಡು, ಚಿತ್ರೀಕರಣ ನೋಡುತ್ತಿದ್ದ ತಾಯಿ ಸುಮೇರಾ ಬಾನು ಹಾಗೂ ಮಗು ಆಯೇರಾ ಬಾನು ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.
ಮತ್ತಷ್ಟು ಹೆಸರು ಬಾಯ್ಬಿಟ್ಟ ಸುಭಾಷ್: ‘ಸ್ಫೋಟ ಸಂಭವಿಸುತ್ತಿದ್ದಂತೆ ಚಿತ್ರತಂಡದವರು ಪರಾರಿಯಾಗಿದ್ದಾರೆ. ಈಗ ಬಂಧಿತರಾಗಿರುವ ಸುಭಾಷ್, ಚಿತ್ರತಂಡದ ಮತ್ತಷ್ಟು ಮಂದಿಯ ಹೆಸರುಗಳನ್ನು ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಮಿಳುನಾಡಿನಲ್ಲಿ ಪ್ರಮುಖ ಆರೋಪಿಗಳು: ‘ಸ್ಫೋಟದಿಂದ ಮೃತಪಟ್ಟ ಸುಮೇರಾ ಬಾನು ಅವರ ಪತಿ ತಬ್ರೇಜ್ ನೀಡಿದ್ದ ದೂರಿನನ್ವಯ ಸಿನಿಮಾದ ನಿರ್ಮಾಪಕ ಆರ್.ಶ್ರೀನಿವಾಸ್, ನಿರ್ದೇಶಕ ವಿ. ಸಮುದ್ರಂ, ವ್ಯವಸ್ಥಾಪಕ ಕಿರಣ್, ಸಾಹಸ ನಿರ್ದೇಶಕ ವಿಜಯನ್ ಹಾಗೂ ತಂತ್ರಜ್ಞರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ವಿವರಿಸಿದರು.
ಕಾರು ಸ್ಫೋಟಿಸಿದ ಅನುಭವವಿದೆ
‘ಸ್ಟಂಟ್ ಮ್ಯಾನ್ ಆಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ನಾನು, ಹಲವು ಸಿನಿಮಾಗಳ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೆ. ನಂತರ, ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಲಾರಂಭಿಸಿದೆ. ಇದುವರೆಗೂ 30ಕ್ಕೂ ಹೆಚ್ಚು ಸಿನಿಮಾಗಳ ದೃಶ್ಯಗಳಿಗಾಗಿ ಕಾರುಗಳನ್ನು ಯಶಸ್ವಿಯಾಗಿ ಸ್ಫೋಟಿಸಿದ್ದೇನೆ’ ಎಂದು ಆರೋಪಿ ಸುಭಾಷ್, ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.