ಬೆಳಗಾವಿ: 'ಚನ್ನಪಟ್ಟಣದ ಯುವತಿಯೊಬ್ಬರು ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. ₹ 50 ಲಕ್ಷ ನೀಡದಿದ್ದರೆ ಅತ್ಯಾಚಾರ, ಸುಲಿಗೆ ಮಾಡಿದ ಪ್ರಕರಣ ದಾಖಲಿಸುವುದಾಗಿ ಪದೇಪದೇ ಪೀಡಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು' ಎಂದು ಕೋರಿ ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ಮಂಗಳವಾರ ದೂರು ದಾಖಲಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ಎ.ಡಿ ರಾಜಕುಮಾರ್ ಟಾಕಳೆ ಎನ್ನುವವರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚನ್ನಪಟ್ಟಣದಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಹಾಗೂ ಅವರ ಸ್ನೇಹಿತ ತಿಲಕರಾಜ ಡಿ.ಟಿ. ಎನ್ನುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
'ನವ್ಯಶ್ರೀ ಅವರದ್ದು ಎನ್ನಲಾದ ಅತ್ಯಂತ ಖಾಸಗಿತನದ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಅಸ್ತ್ರವಾಗಿ ಇಟ್ಟುಕೊಂಡು ನನ್ನ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ' ಎಂದೂ ರಾಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.
'ಡಿಸೆಂಬರ್ 2020ರಲ್ಲಿ ನಾನು ಬೆಂಗಳೂರಲ್ಲಿ ಕೆಲಸ ಮಾಡುವಾಗ ನವ್ಯಶ್ರೀ ಪರಿಚಯವಾಯಿತು. ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು ಸ್ನೇಹಬೆಳೆಸಿದ್ದರು. ಚನ್ನಪಟ್ಟಣದಲ್ಲಿ ನವ್ಯ ಫೌಂಡೇಷನ್ ಹೆಸರಿನ ಎನ್‌ಜಿಒ ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ನನ್ನೊಂದಿಗೆ 'ಸಲುಗೆ' ಬೆಳೆಸಿಕೊಂಡರು' ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.
'ಒಂದೂವರೆ ವರ್ಷದ ಪರಿಚಯದಲ್ಲಿ ಬೆಳಗಾವಿಯೂ ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ನಾವು 'ಸೇರಿದ್ದು' ನಿಜಎಂದೂ ರಾಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.
'2021ರ ಡಿಸೆಂಬರ್ 24ರಂದು ನವ್ಯಶ್ರೀ ನನಗೆ ಕರೆ ಮಾಡಿ ಬೆದರಿಕೆ ಹಾಕಿದರು. ನವ್ಯಶ್ರೀ ಹಾಗೂ ನಾನು ಆತ್ಮೀಯವಾಗಿ ಇರುವ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ಮಾಡಿದರು. ಅವರ ಜತೆಗೆ ತಿಲಕರಾಜ ಕೂಡ ಬೆದರಿಕೆ ಒಡ್ಡಿದರು. ₹ 50 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನನ್ನ ಪತ್ನಿ, ಸಂಬಂಧಿಕರಿಗೆ ಖಾಸಗಿ ಕ್ಷಣದ ವಿಡಿಯೊ ತೋರಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ' ಎಂದೂ ತಿಳಿಸಿದ್ದಾರೆ.
'ಬಳಿಕ ನನ್ನ ಮನೆಗೆ ಬಂದು ಬೇಡಿಕೆ ಈಡೇರುವವರೆಗೂ ಬಿಟ್ಟು ಹೋಗುವುದಿಲ್ಲ ಎಂದು ಪೀಡಿಸಿದ್ದಾರೆ. ಆದ್ದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನವ್ಯಶ್ರೀ ವಿರುದ್ಧ ಐಪಿಸಿ 1860(u/s.384, 448, 504, 506, 34) ಅಡಿ ಕೇಸ್ ದಾಖಲಿಸಲಾಗಿದೆ.
ಕಾಂಗ್ರೆಸ್ ಮುಖಂಡರೊಂದಿಗೆ ಫೋಟೊ:ಆರೋಪ ಹೊತ್ತಿರುವ ಯುವತಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರ ಜತೆಗೆ ಈ ಯುವತಿ ಫೋಟೊ ತೆಗೆಸಿಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾದ ಫೋಟೊಗಳೂ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.