ಬೆಂಗಳೂರು: ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಹಾವೇರಿ ಮೂಲದ ಮಹಿಳೆ ಸಂಜಯನಗರ ಪೊಲೀಸ್ ಠಾಣೆಗೆ ನೀಡಿರುವ ದೂರು ಹಾಗೂ ಶಾಸಕರು ನೀಡಿರುವ ಪ್ರತಿ ದೂರುಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
‘ಶಾಸಕ ವಿನಯ್‌ಕುಲಕರ್ಣಿ ಅತ್ಯಾಚಾರ ನಡೆಸಿದ್ದಾರೆ’ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಅದಕ್ಕೆ ಪ್ರತಿಯಾಗಿ ದೂರುದಾರ ಮಹಿಳೆ ಹಾಗೂ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ಥರು ₹2 ಕೋಟಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ವಿನಯ್ ಕುಲಕರ್ಣಿ ಪ್ರತಿ ದೂರು ನೀಡಿದ್ದರು. ಈ ಎರಡೂ ದೂರುಗಳ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ.
‘ರೈತ ಹೋರಾಟ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನನಗೆ, 2022ರಲ್ಲಿ ವಿನಯ್ ಕುಲಕರ್ಣಿ ಅವರ ಪರಿಚಯವಾಗಿತ್ತು. ನನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಹೆಬ್ಬಾಳ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದೆ. ‘ದೇವನಹಳ್ಳಿ ಹಾಗೂ ಧರ್ಮಸ್ಥಳಕ್ಕೆ ಬಲವಂತದಿಂದ ಕರೆದೊಯ್ದು ಅತ್ಯಾಚಾರ ನಡೆಸಿ ಜೀವಬೆದರಿಕೆ ಹಾಕಿದ್ದರು’ ಎಂದು ಮಹಿಳೆ ದೂರು ನೀಡಿದ್ದರು.
‘ಆಡಿಯೊ ಹಾಗೂ ವಿಡಿಯೊಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿ ₹2 ಕೋಟಿಗೆ ಬೇಡಿಕೆಯಿಟ್ಟು ಸುಲಿಗೆಗೆ ಮುಂದಾಗಿದ್ದರು’ ಎಂದು ಆರೋಪಿಸಿ ವಿನಯ್ ಕುಲಕರ್ಣಿ ಪ್ರತಿದೂರು ನೀಡಿದ್ದಾರೆ. ಆ ದೂರು ಆಧರಿಸಿ ವಾಹಿನಿಯೊಂದರ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ದೂರು ನೀಡಿದ ಸಂತ್ರಸ್ತೆ ವಿರುದ್ಧವೂ ಸುಲಿಗೆ ಪ್ರಕರಣದ ಅಡಿ ಇದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.