ವಿಜಯಪುರ:ಕುರಿ ಕಾಯುತ್ತಿದ್ದ ಬಾಲಕಿಯನ್ನು ಬೆದರಿಸಿ, ಅತ್ಯಾಚಾರ ಎಸಗಿರುವ ಘಟನೆ ವಿಜಯಪುರ ತಾಲ್ಲೂಕಿನ ಉತ್ನಾಳ, ಉತ್ನಾಳ ಲಂಬಾಣಿ ತಾಂಡಾದ ನಡುವೆ ಶನಿವಾರ ನಡೆದಿದೆ.
ಹೆಗಡಿಹಾಳದ ಪರಸಪ್ಪ ಪೂಜಾರಿ (20) ಎಂಬಾತ ಆರೋಪಿ. ಈತನಿಗೆ ಮತ್ತೊಬ್ಬ ಸಹಕರಿಸಿದ್ದಾನೆ ಎನ್ನಲಾಗಿದ್ದು, ಆತ ಅಪ್ರಾಪ್ತ ಬಾಲಕನಿದ್ದಾನೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಉತ್ನಾಳ ಗ್ರಾಮದ ಅಪ್ರಾಪ್ತೆ ಇನ್ನೂ ಇಬ್ಬರು ಹೆಣ್ಮಕ್ಕಳೊಂದಿಗೆ ಕುರಿ ಮೇಯಿಸಲು ಗ್ರಾಮದಿಂದ ಹೊರ ಹೋಗಿದ್ದಳು. ಈ ಸಂದರ್ಭ ಹೆಗಡಿಹಾಳ ಗ್ರಾಮದಿಂದ ಕುರಿ ಮೇಯಿಸಿಕೊಂಡು ಈ ಕಡೆ ಬಂದಿದ್ದ ಪರಸಪ್ಪ ಬಾಲಕಿಗೆ ದಬಾಯಿಸಿದ್ದಾನೆ.
ನಮ್ಮ ಮಾವನ ಹೊಲದಲ್ಲಿ ಕುರಿ ಮೇಯಿಸಿದ್ದೀಯ. ನಿನಗೆ ತಕ್ಕ ಶಾಸ್ತಿ ಮಾಡಿಸುವೆ ಎಂದು ಮೊಬೈಲ್ ಕರೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭ ಬಾಲಕಿ ಬೇಡ ಅಣ್ಣ. ಇಲ್ಲಿಯೇ ಮುಗಿಸಿಬಿಡು ಎನ್ನುತ್ತಿದ್ದಂತೆ; ಬಾಲಕಿಯ ಜತೆಯಲ್ಲಿದ್ದ ಇಬ್ಬರು ಹುಡುಗಿಯರನ್ನು ಕುರಿ ಹೊಡೆದುಕೊಂಡು ಮನೆಗೆ ಹೋಗುವಂತೆ ಬೆದರಿಸಿದ್ದಾನೆ.
ಹುಡುಗಿಯರಿಬ್ಬರು ಅತ್ತ ತೆರಳುತ್ತಿದ್ದಂತೆ ಒಬ್ಬಳಾದ ಹನ್ನೆರಡರಿಂದ ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.