ಬೆಂಗಳೂರು:‘ ‘ಇಂಡಿ’ ಒಕ್ಕೂಟ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ತುಟಿ ಬಿಚ್ಚುತ್ತಿಲ್ಲ. ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವಿರಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಅಕ್ರಮಗಳ ಆರೋಪಗಳ ಬಗ್ಗೆ ಮೌನವಹಿಸಿದ್ದಾರೆ ಎಂದು ಹರಿಹಾಯ್ದರು.
ಕರ್ನಾಟಕದ್ದು ಡಬಲ್ ಟ್ರಬಲ್ ಸರ್ಕಾರ. ಇಲ್ಲಿ ಕಟಾಕಟ್ ಲೂಟ್, ಝೂಟ್ ಸರ್ಕಾರ ವಿದೆ. ರಾಹುಲ್‌ಗಾಂಧಿಯ ಕಟಾಕಟ್ ಲೂಟ್ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಮುಡಾ ನಿವೇಶ ಹಂಚಿಕೆಯಲ್ಲಿ ನಡೆದಿರುವ ಅಕ್ರಮದಲ್ಲಿ ₹5 ಸಾವಿರ ಕೋಟಿಯಷ್ಟು ಹಗರಣ ನಡೆದಿದೆ ಎಂದು ಪೂನಾವಾಲಾ ಆರೋಪಿಸಿದರು.
ಲೂಟಿ ಮತ್ತು ಸುಳ್ಳು ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿವಾಗಿ ದಿವಾಳಿಯಾಗಿದೆ. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಜನರ ಮೇಲೆ ನ್ಯಾಯ ಸಮ್ಮತವಲ್ಲದ ಜಝಿಯಾ ತೆರಿಗೆ ಹಾಕಲು ಮುಂದಾಗಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್, ಬಸ್ ಪ್ರಯಾಣ ದರ, ನೀರಿನ ದರ, ಸಿನಿಮಾ ಟಿಕೆಟ್ ಸೇರಿ ಎಲ್ಲೆಡೆ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಎಸ್‌ಸಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು ₹25 ಸಾವಿರ ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿ ಲೂಟಿ ಮಾಡಲಾಗಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕರು ಮಾತನಾಡುತ್ತಿಲ್ಲ. ನ್ಯಾಯ ಕೊಡುವ ಬಗ್ಗೆ ಮಾತನಾಡುವ ರಾಹುಲ್‌ಗಾಂಧಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಪಶ್ಚಿಮ ಬಂಗಾಲದಲ್ಲಿ ಪ್ರಾಯೋಜಿತ ಹಿಂಸೆ
ಆ.14 ರ ಮಧ್ಯರಾತ್ರಿ ಮಹಿಳಾ ಪ್ರತಿಭಟನಾಕಾರರು, ವೈದ್ಯರ ಮೇಲೆ ಟಿಎಂಸಿ ಪ್ರಾಯೋಜಿತ ಗೂಂಡಾಗಳಿಂದ ಹಲ್ಲೆ ನಡೆದಿದೆ. ಗೂಂಡಾಗಳು ಆಸ್ಪತ್ರೆ ಮೇಲೆ ದಾಳಿ ಮಾಡಿದ್ದೂ ಅಲ್ಲದೇ, ಮಹಿಳಾ ವೈದ್ಯರಿಗೆ ಬೆದರಿಕೆ ಹಾಕಿದ್ದಾರೆ. ಸಾಕ್ಷ್ಯ ನಾಶಕ್ಕಾಗಿಯೇ ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಶೆಹಜಾದ್ ಪೂನಾವಾಲಾ ದೂರಿದರು.
ಪಶ್ಚಿಮಬಂಗಾಳದ ನಿರ್ಭಯಾ ದುರ್ಘಟನೆ ಎಂದು ಕರೆಯಲ್ಪಡುತ್ತಿರುವ ಈ ಪ್ರಕರಣದಲ್ಲಿ ಟೆಎಂಸಿ ಆರೋಪಿಗಳಿಗೆ ವ್ಯವಸ್ಥಿತವಾಗಿ ಸಹಾಯ ಮಾಡುತ್ತಿದೆ. ಪಶ್ಚಿಮಬಂಗಾಲದಲ್ಲಿ ಈಗ ಕೇವಲ ಬಲತ್ಕಾರಿಗಳು ಮಾತ್ರ ಸುರಕ್ಷಿತರು. ಕೋಲ್ಕತ್ತಾವು ಸಿಟಿ ಆಫ್ ಜಾಯ್ ಆಗಿ ಉಳಿದಿಲ್ಲ, ಆತಂಕ ಭಯದ ನಗರವಾಗಿದೆ ಎಂದು ಹೇಳಿದರು.
ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಹುಲ್ ಗಾಂಧಿ ಒಂದು ಟ್ವೀಟ್ ಮಾಡಿದ್ದು ಬಿಟ್ಟರೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ಕೇಳುವ ಧೈರ್ಯ ತೋರಿಸಿಲ್ಲ. ಮಮತಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.