ಬೆಂಗಳೂರು: ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಜಿಪಿ ಡಾ.ಪಿ. ರವೀಂದ್ರನಾಥ್ ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಸಲ್ಲಿಸಿದ್ದಾರೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಆಗಿದ್ದ ರವೀಂದ್ರನಾಥ್ ಅವರನ್ನು ಪೊಲೀಸ್ ತರಬೇತಿ ವಿಭಾಗಕ್ಕೆ ಇತ್ತೀಚೆಗಷ್ಟೇ ವರ್ಗಾಯಿಸಲಾಗಿತ್ತು. ಸೋಮವಾರವಷ್ಟೇ ಅವರು ಅಧಿಕಾರ ವಹಿಸಿಕೊಂಡಿದ್ದರು.
ವಿಧಾನಸೌಧದಲ್ಲಿ ಮಂಗಳವಾರ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾದ ರವೀಂದ್ರನಾಥ್, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
‘ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಕಿರುಕುಳ ನೀಡುವ ಉದ್ದೇಶದಿಂದಲೇ ಅವಧಿಗೆ ಮುನ್ನವೇ ನನ್ನನ್ನು ವರ್ಗಾವಣೆ ಮಾಡಲಾಗಿದೆ. ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರಿಂದಲೇ ನನ್ನನ್ನು ವರ್ಗಾವಣೆ ಮಾಡಲಾಯಿತು. 1995ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ನಿಯಮಗಳ ಅನ್ವಯ ರಕ್ಷಣಾ ಘಟಕ ಸ್ಥಾಪಿಸಿ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಕೋರಿದ್ದೆ. ಆದರೆ, ಅವರು ನಿರ್ಲಕ್ಷ್ಯ ವಹಿಸಿದರು’ ಎಂದಿದ್ದಾರೆ.
ಬಡ್ತಿ ಸಿಗದಿದ್ದಾಗಲೂ ರಾಜೀನಾಮೆ:
ಬಡ್ತಿ ಹಾಗೂ ಇತರೆ ವಿಚಾರಕ್ಕೆ ಸಂಬಂಧಿಸಿ ಮನಸ್ತಾಪಗೊಂಡು ರವೀಂದ್ರನಾಥ್, 2008, 2014 ಹಾಗೂ 2020ರಲ್ಲೂ ರಾಜೀನಾಮೆ ನೀಡಿದ್ದರು. ಸರ್ಕಾರ ಆಗ ರಾಜೀನಾಮೆ ಅಂಗೀಕರಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.