ADVERTISEMENT

ಹಾಲಿನ ಉತ್ಪನ್ನ ಆರ್‌ಸಿಇಪಿ ವ್ಯಾಪ್ತಿಗೆ ಬೇಡ: ಪ್ರಧಾನಿಗೆ ಪತ್ರ

ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 4:14 IST
Last Updated 25 ಅಕ್ಟೋಬರ್ 2019, 4:14 IST

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ (ಆರ್‌ಸಿಇಪಿ) ಹೊರಗಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಜಿಕೆವಿಕೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ನಾಲ್ಕು ದಿನಗಳ ಕೃಷಿಮೇಳ–2019 ಉದ್ಘಾಟಿಸಿ ಮಾತನಾಡಿದ ಅವರು, ‘ಈ ಸಂಬಂಧ ಶೀಘ್ರವೇ ರಾಜ್ಯದ 28 ಸಂಸತ್‌ ಸದಸ್ಯರನ್ನೂ ಒಳಗೊಂಡ ನಿಯೋಗದೊಂದಿಗೆ ಪ್ರಧಾನಿ ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಲಾಗುವುದು’ ಎಂದರು.

‘ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಭಾರತಕ್ಕೆ ಆಮದು ಮಾಡಿಕೊಂಡರೆ ಇಲ್ಲಿನ ಹಾಲು ಉತ್ಪಾದಕರಿಗೆ ಆಗಲಿರುವ ತೊಂದರೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗುವ ವಿಶ್ವಾಸ ಇದೆ. ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

₹50 ಸಾವಿರ ಕೋಟಿ ನಷ್ಟ: ಭಾರತದಲ್ಲಿ ಉತ್ಪಾದನೆಯಾದ ಆಹಾರದ ಪೈಕಿ ಶೇ 40ರಷ್ಟು ಅಂದರೆ ಸುಮಾರು ₹50 ಸಾವಿರ ಕೋಟಿ ಮೌಲ್ಯದ ಆಹಾರ ಧಾನ್ಯ ಪೋಲಾಗುತ್ತಿದೆ. ಹಸಿವಿನ ಸೂಚ್ಯಾಂಕದಲ್ಲಿ 117 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ಒಂದೆಡೆ ಹಸಿವಿದ್ದರೆ ಇನ್ನೊಂದೆಡೆ ಆಹಾರ ಪೋಲಾಗುತ್ತಿದೆ. ಇದನ್ನು ತಪ್ಪಿಸಲು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಗಳ ಮಧ್ಯೆ ಸಮಾಲೋಚನೆಗಳ ನಡೆಯಬೇಕಿದೆ ಎಂದು ಅವರ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕೃಷ್ಣ ಬೈರೇಗೌಡ, ‘ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪ ಅವರೇ ಮೊದಲು ಆರಂಭಿಸಿದರು. ಆಗ ₹2 ಇದ್ದ ಪ್ರೋತ್ಸಾಹಧನ ಈಗ ₹5ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಬಹುತೇಕ ಎಲ್ಲಾ ರೈತರೂ ಹಸುಗಳನ್ನು ಸಾಕಿದ್ದು, ಹಾಲು ಉತ್ಪಾದಕರೇ ಆಗಿದ್ದಾರೆ. ವಿದೇಶದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ಆಮದು ಮಾಡಿಕೊಂಡರೆ ಅವರೆಲ್ಲರೂ ಸಂಕಷ್ಡಕ್ಕೆ ಸಿಲುಕುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಮೇಲೆ ಮುಖ್ಯಮಂತ್ರಿ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.