ADVERTISEMENT

ನೀರಿನ ಸುಸ್ಥಿರ ಬಳಕೆಯಲ್ಲಿ ಅರಿವಿನ ಕೊರತೆ: ಸಚಿವ ಕೃಷ್ಣ ಬೈರೇಗೌಡ

ನೀರು, ಸುಸ್ಥಿರತೆ ಶೃಂಗಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:06 IST
Last Updated 29 ಅಕ್ಟೋಬರ್ 2024, 16:06 IST
<div class="paragraphs"><p>‘ನೀರು ಮತ್ತು ನೈರ್ಮಲ್ಯ, ಸುಸ್ಥಿರತೆ’ ಶೃಂಗಸಭೆಯಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ಕೃಷ್ಣ ಬೈರೇಗೌಡ ಚರ್ಚೆಯಲ್ಲಿ ತೊಡಗಿದ್ದರು.  </p></div>

‘ನೀರು ಮತ್ತು ನೈರ್ಮಲ್ಯ, ಸುಸ್ಥಿರತೆ’ ಶೃಂಗಸಭೆಯಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ಕೃಷ್ಣ ಬೈರೇಗೌಡ ಚರ್ಚೆಯಲ್ಲಿ ತೊಡಗಿದ್ದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನೀರಿನ ಸುಸ್ಥಿರ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವಿನ ಕೊರತೆ ಇದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಕ್ರಮ ತೆಗೆದುಕೊಂಡಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮಂಗಳವಾರ ಆಯೋಜಿಸಿದ್ದ, ‘ನೀರು ಮತ್ತು ನೈರ್ಮಲ್ಯ, ಸುಸ್ಥಿರತೆ’ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೀರಿನ ದೊಡ್ಡ ಮೂಲಗಳನ್ನು ವಿವೇಚನಾರಹಿತವಾಗಿ ಬಳಸಲಾಗುತ್ತಿದೆ ಮತ್ತು ಕಲುಷಿತಗೊಳಿಸಲಾಗುತ್ತಿದೆ. ನೀರಾವರಿ ಪ್ರದೇಶಗಳಲ್ಲಿ ಬಳಕೆ ಯಥೇಚ್ಛವಾಗಿದ್ದರೆ, ಒಣ ಪ್ರದೇಶಗಳಲ್ಲಿ ತೀವ್ರ ಕೊರತೆ ಇದೆ. ನೀರಿನ ಸುಸ್ಥಿರ ಬಳಕೆ ಬಗ್ಗೆ ಅರಿವು ಇಲ್ಲದೇ ಇರುವುದರಿಂದಲೇ ಹೀಗಾಗುತ್ತಿದೆ’ ಎಂದರು.

‘ನೈರ್ಮಲ್ಯದಲ್ಲೂ ನಾವು ಹಿಂದೆ ಉಳಿದಿದ್ದೇವೆ. ಸ್ವಚ್ಛಭಾರತ ಯೋಜನೆಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಹಿಂದಿದ್ದೇವೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿತ ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು’ ಎಂದರು.

‘ಈ ಮೊದಲು ಮನೆ–ಮನೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಹಿಂದುಳಿದಿದ್ದೆವು. ಈಗ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲವಾದರೂ, ಗಣನೀಯ ಪ್ರಗತಿ ಸಾಧಿಸಿದ್ದೇವೆ. ಪ್ರತಿದಿನ ಮನೆಮನೆಗೆ ಕನಿಷ್ಠ 55 ಲೀಟರ್‌ನಷ್ಟು ಕುಡಿಯುವ ನೀರು ಒದಗಿಸುವ ಮಟ್ಟಕ್ಕೆ ಬಂದಿದ್ದೇವೆ’ ಎಂದರು.

‘ಹವಾಮಾನ ವೈಪರೀತ್ಯ ಎದುರಿಸುವ ಸವಾಲು’ ‘ಅತಿಹೆಚ್ಚು ಮಳೆಯಾಗುವ ಮತ್ತು ಅತ್ಯಂತ ಒಣ ಪ್ರದೇಶಗಳೆರಡೂ ಕರ್ನಾಟಕದಲ್ಲಿವೆ. ಮುಂಗಾರು ಆರಂಭದಲ್ಲಿ ಮಳೆ ಕೊರತೆಯಾಗಿತ್ತು. ಮುಂಗಾರು ಅಂತ್ಯ ಮತ್ತು ಹಿಂಗಾರಿನ ಆರಂಭದ ವೇಳೆಗೆ ಅತಿವೃಷ್ಟಿಯಾಗಿದೆ. ಇಂತಹ ಹವಾಮಾನ ವೈಪರೀತ್ಯವನ್ನು ಎದುರಿಸುವ ಸವಾಲು ಇದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ‘ಜುಲೈ 10ಕ್ಕೆ ಸರ್ವಪಕ್ಷಗಳ ಸಭೆ ಕರೆದು ತಮಿಳುನಾಡಿಗೆ ನೀರು ಹರಿಸದೇ ಇರುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಜುಲೈ 22ರ ವೇಳೆಗೆ ಪ್ರವಾಹ ಸ್ಥಿತಿ ತಲೆದೋರಿತ್ತು. 12 ದಿನಗಳಲ್ಲಿ ಬರದ ಸ್ಥಿತಿ ಬದಲಾಗಿ ಪ್ರವಾಹ ತಲೆದೋರಿತ್ತು. ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಶೇ 78ರಷ್ಟು ಮಳೆ ಕೊರತೆಯಾಗಿತ್ತು ಅಕ್ಟೋಬರ್‌ನಲ್ಲಿ ದಾಖಲೆಯಷ್ಟು ಮಳೆ ಸುರಿಯಿತು. ಈ ಹಿಂದಿನಿಂದಲೂ ಇರುವ ಸಮಸ್ಯೆಗಳ ಜತೆಗೆ ಈ ಸ್ವರೂಪದ ಹೊಸ ಸಮಸ್ಯೆಗಳೂ ಎದುರಾಗುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.