ADVERTISEMENT

ಮೀಸಲಾತಿ ಮರುಹಂಚಿಕೆ: ಜಟಾಪಟಿ

ಅವೈಜ್ಞಾನಿಕ ಮೀಸಲಾತಿ ವರ್ಗೀಕರಣ ರದ್ದು: ಕಾಂಗ್ರೆಸ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 19:58 IST
Last Updated 26 ಮಾರ್ಚ್ 2023, 19:58 IST
ಬೊಮ್ಮಾಯಿ
ಬೊಮ್ಮಾಯಿ   

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ 2–ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ಕಿತ್ತು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡುವ ಸರ್ಕಾರದ ನಿರ್ಧಾರ ಅವೈಜ್ಞಾನಿಕ ಎಂದು ಟೀಕಿಸಿರುವ ಕಾಂಗ್ರೆಸ್‌, ತಾನು ಅಧಿಕಾರಕ್ಕೆ ಬಂದರೆ ಈ ತೀರ್ಮಾನವನ್ನು ರದ್ದು ಮಾಡುವುದಾಗಿ ಭರವಸೆ ನೀಡಿದೆ.

ಮುಸ್ಲಿಂ ಶಾಸಕರ ಜತೆ ಭಾನುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ನಾಯಕರು, ‘ಸೇಡಿನ ಮತ್ತು ದ್ವೇಷದ ರಾಜಕೀಯದಲ್ಲಿ ತೊಡಗಿರುವ ಬಿಜೆಪಿ, ಅವೈಜ್ಞಾನಿಕವಾಗಿ ಮೀಸಲಾತಿ ವಿಂಗಡಿಸಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಈಗ ಪ್ರಕಟಿಸಿರುವ ಜನದ್ರೋಹಿ ತೀರ್ಮಾನವನ್ನು ರದ್ದುಪಡಿಸುತ್ತೇವೆ’ ಎಂದು ಹೇಳಿದರು.

ಸ್ವಾಮೀಜಿಗಳಿಗೆ ಬೆದರಿಕೆ

ADVERTISEMENT

‘ಹೊಸ ಮೀಸಲಾತಿ ವರ್ಗೀಕರಣ ಒಪ್ಪಿಕೊಳ್ಳುವಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸರ್ಕಾರ ಹೆದರಿಸಿ ಒಪ್ಪಿಸಿದೆ’ ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

‘ಸ್ವಾಮೀಜಿಗಳಿಗೆ ಈ ವಿಷಯದ ಬಗ್ಗೆ 25ಕ್ಕೂ ಹೆಚ್ಚು ಬಾರಿ ದೂರವಾಣಿ ಕರೆ ಮಾಡಲಾಗಿದೆ. ದಯವಿಟ್ಟು ಒಪ್ಪಿಕೊಳ್ಳಿ ಎಂದು ಪದೇ ಪದೇ ಕೋರಿದ್ದಾರೆ’ ಎಂದು ವಿವರಿಸಿದರು.

‘ಬೊಮ್ಮಾಯಿ ಕರ್ನಾಟಕದ ಶಕುನಿ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದ ಶಕುನಿ. ಆದರೆ, ಕರ್ನಾಟಕದ ಪಾಂಡವರನ್ನು ಸೋಲಿಸಲು ಬಿಜೆಪಿ ಮತ್ತು ಬೊಮ್ಮಾಯಿ ಅವರಿಗೆ ಸಾಧ್ಯವಿಲ್ಲ. 420 ಬೊಮ್ಮಾಯಿ ಸರ್ಕಾರ ಮೀಸಲಾತಿ ವಿಷಯದಲ್ಲಿ ರಾಜ್ಯದ ಜನರನ್ನು ವಂಚಿಸಿದೆ’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿಗೆ ಯಾವ ಸಮುದಾಯಕ್ಕೂ ಮೀಸಲಾತಿ ನೀಡುವ ಉದ್ದೇಶ ಇಲ್ಲ. ಕೇವಲ 420 ಕಾರ್ಯಸೂಚಿ ಜಾರಿಗೊಳಿಸುವುದು ಮತ್ತು ಸಮುದಾಯಗಳನ್ನು ವಿಭಜಿಸಿ ದ್ವೇಷ ಬಿತ್ತುವ ಕಾರ್ಯದಲ್ಲಿ ತೊಡಗುವುದು ಈ ಪಕ್ಷದ ಉದ್ದೇಶವಾಗಿದೆ’ ಎಂದು ಟೀಕಿಸಿದರು.

‘ಶೇಕಡ 40ರಷ್ಟು ಕಮಿಷನ್‌ ಆರೋಪ ಮತ್ತು ಹಗರಣಗಳನ್ನು ಮರೆಮಾಚಲು ಬಿಜೆಪಿ ಸರ್ಕಾರ ಮೀಸಲಾತಿ ವಿಷಯವನ್ನು ಮುನ್ನೆಲೆಗೆ ತಂದಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರು ವರದಿ ನೀಡಿ ನಾಲ್ಕು ವರ್ಷಗಳಾದರೂ ಯಾವುದೇ ಕ್ರಮಕೈಗೊಳ್ಳದ ಸರ್ಕಾರ ಈಗ ಚುನಾವಣಾ ಹೊತ್ತಿನಲ್ಲಿ ಮೀಸಲಾತಿ ಬಗ್ಗೆ ನಿರ್ಧಾರ ಪ್ರಕಟಿಸಿದೆ. ಕೇವಲ ಗೊಂದಲ ಸೃಷ್ಟಿಸಲು ಮೀಸಲಾತಿ ವಿಂಗಡಿಸಲಾಗಿದ್ದು, ಕನ್ನಡಿಗರಿಗೆ ಮತ್ತು ಸಂವಿಧಾನಕ್ಕೆ ಅಗೌರವ ತೋರಿಸಲಾಗಿದೆ’ ಎಂದರು.

‘ಬಿಜೆಪಿ ಅಂದರೆ ನಂಬಿಕೆ ದ್ರೋಹದ ಪಕ್ಷ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಯಾವುದೇ ಆಯೋಗಗಳ ವರದಿ ಮತ್ತು ಸಮೀಕ್ಷೆಗಳು ಇಲ್ಲದೆಯೇ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಹೀಗಿರುವಾಗ, ಇದು ಜಾರಿಯಾಗಲು ಸಾಧ್ಯವೇ ಇಲ್ಲ’ ಎಂದರು.

‘ಸರ್ಕಾರವನ್ನು ವಜಾಗೊಳಿಸಿ’

‘ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಬಿಜೆಪಿ, ಕೇವಲ ರಾಜಕೀಯ ಗಿಮಿಕ್‌ಗಾಗಿ ಮೀಸಲಾತಿಯನ್ನು ವಿಂಗಡಿಸಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

‘ಸಂವಿಧಾನಕ್ಕೆ ಅಗೌರವ ತೋರಿರುವ ಈ ಸರ್ಕಾರವನ್ನು ತಕ್ಷಣವೇ ವಜಾ ಮಾಡಬೇಕು. ಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿಸಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಬಿಜೆಪಿ ವಿಭಜಿಸುತ್ತಿದೆ. 1995ರ ಮೇ ತಿಂಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿ ರದ್ದುಪಡಿಸುವಂತೆ ಯಾವ ವರದಿ ಅಥವಾ ನ್ಯಾಯಾಲಯಗಳು ತೀರ್ಪು ನೀಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.