ಬೆಂಗಳೂರು: ಪಿಎಸ್ಐ ನೇರ ನೇಮಕಾತಿಯ ಮರು ಪರೀಕ್ಷೆ ಮಂಗಳವಾರ ಸುಸೂತ್ರವಾಗಿ ನೆರವೇರಿತು. ಪರೀಕ್ಷೆಗೆ ಅರ್ಹರಾಗಿದ್ದ 54 ಸಾವಿರ ಅಭ್ಯರ್ಥಿಗಳಲ್ಲಿ ಶೇ 66ರಷ್ಟು ಮಂದಿ ಹಾಜರಾಗಿದ್ದರು.
ಎಲ್ಲ 117 ಪರೀಕ್ಷಾ ಕೇಂದ್ರಗಳಲ್ಲೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಪ್ರತಿ ಪರೀಕ್ಷಾ ಕೇಂದ್ರಕ್ಕೂ ತಲಾ 6 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಕಳೆದ ಬಾರಿ ನಡೆದಿದ್ದ ಇದೇ ನೇಮಕಾತಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಅಕ್ರಮಗಳು ಪತ್ತೆಯಾಗಿ ಆಯ್ಕೆ ಪಟ್ಟಿಯನ್ನೇ ರದ್ದು ಮಾಡಲಾಗಿತ್ತು. ಹಾಗಾಗಿ, ಈ ಬಾರಿಯ ಪರೀಕ್ಷೆಯಲ್ಲಿ ಕಲಬುರಗಿ, ರಾಯಚೂರು ಭಾಗದ ಶಿಕ್ಷಕರನ್ನು ಪರೀಕ್ಷಾ ಕಾರ್ಯದ ಹೊಣೆಯಿಂದ ಹೊರಗಿಡಲಾಗಿತ್ತು. ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆ ಭಾಗದ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಮೇಲ್ವಿಚಾರಕರಾಗಿ ನಿಯೋಜಿಸಲಾಗಿತ್ತು.
ಕಟ್ಟುನಿಟ್ಟಿನ ನಿಯಮಕ್ಕೆ ಪರದಾಡಿದ ಅಭ್ಯರ್ಥಿಗಳು: ಪರೀಕ್ಷಾ ನೀತಿ ಸಂಹಿತೆಗಳನ್ನೂ ಈ ಬಾರಿ ಕಟ್ಟಿನಿಟ್ಟಾಗಿ ಪಾಲಿಸಲಾಯಿತು. ಇದರಿಂದ ಹಲವು ಅಭ್ಯರ್ಥಿಗಳು ಪರದಾಡಿದರು.
ಪೂರ್ಣ ತೋಳಿನ ಶರ್ಟ್ ಧರಿಸಿ ಬಂದಿದ್ದ ಅಭ್ಯರ್ಥಿಯೊಬ್ಬರು ಶರ್ಟ್ ಬದಲಿಸಲು ನಿರಾಕರಿಸಿದರು. ಸಿಬ್ಬಂದಿ ಒಳಗೆ ಬಿಡಲು ಒಪ್ಪಲಿಲ್ಲ. ಕೊನೆಗೆ ಪರೀಕ್ಷಾ ಕೇಂದ್ರದಿಂದಲೇ ಹೊರನಡೆದರು. ಗದಗ ಜಿಲ್ಲೆಯಿಂದ ಬಂದಿದ್ದ ಅಭ್ಯರ್ಥಿಯೊಬ್ಬರು ಕೈಗೆ ಹಾಕಿದ್ದ ಕಡಗ ತೆಗೆಯಲು ಹರಸಾಹಸಪಟ್ಟರು. ಶಾಂಪು ಬಳಸಿದರೂ ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಕಟ್ಟಿಂಗ್‌ಪ್ಲೇಯರ್ ಬಳಸಿ ಕಟ್ ಮಾಡುವಾಗ ಕೈಗೆ ಗಾಯವಾಯಿತು. ನಂತರ ಚಿಕಿತ್ಸೆ ಪಡೆದು ಪರೀಕ್ಷೆ ಬರೆದರು. ಹಲವರಿಗೆ ಕೊರಳಿನ ದಾರ ತೆಗೆಸಲಾಯಿತು. ಜೀನ್ಸ್ ಪ್ಯಾಂಟ್ ಬದಲಿಸಿಕೊಂಡು ಬರುವಂತೆ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.