ಬೆಂಗಳೂರು: ‘ಹಳ್ಳಹಿಡಿದ ಹನಿ ನೀರಾವರಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮೇ 29) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ‍್ರತಿಕ್ರಿಯೆಗಳು ಇಲ್ಲಿವೆ.
‘ತಜ್ಞರ ಅಭಿಪ್ರಾಯ ಪಡೆಯಬೇಕು’
ಹನಿ ನೀರಾವರಿ ಅಥವಾ ತುಂತುರು ನೀರಾವರಿ ಯೋಜನೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ಜಲಸಂಪನ್ಮೂಲ ಸಚಿವರು ಒಪ್ಪಿಕೊಂಡ ಮಾತ್ರಕ್ಕೆ ಯೋಜನೆಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಯೋಜನೆ ಅನುಷ್ಠಾನದಲ್ಲಿ ಎಲ್ಲಿ ತೊಡಕಾಗಿದೆ ಎಂಬುದನ್ನು ತಜ್ಞರ ಅಭಿಪ್ರಾಯ ಪಡೆದು, ತೊಡಕು ಬಗೆಹರಿಸಬಹುದಿತ್ತು. ಆದರೆ, ಯೋಜನೆಯನ್ನೇ ಬದಲಿಸಿ, ಪರ್ಯಾಯ ಪೈಪ್‌ಲೈನ್ ಮೂಲಕ ರೈತನ ಹೊಲಕ್ಕೆ ಔಟ್ಲೆಟ್ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಲಾಗಿರುವುದು ಎಷ್ಟು ಸರಿ? ಈ ಹಿಂದೆ ಯೋಜನೆ ರೂಪಿಸಿದವರು ಯೋಜನೆಯ ಪೂರ್ಣಪ್ರಮಾಣದ ತಾಂತ್ರಿಕ ವರದಿ ನೀಡಿರಲಿಲ್ಲವೆ? ಯೋಜನೆಗೆ ಅನುಮೋದನೆ ನೀಡಿ, ಸರ್ಕಾರದ ಹಣ ಪೋಲು ಮಾಡಿದವರ ಹೊಣೆಗಾರಿಕೆ ಏನು? ಮೂಲ ಯೋಜನೆಯ ವರದಿ ಪರಾಮರ್ಶಿಸಿ, ತಾಂತ್ರಿಕ ತೊಂದರೆಗಳಿದ್ದರೆ ತಜ್ಞರ ಸಲಹೆ ಪಡೆದು ಯೋಜನೆ ಪೂರ್ಣಗೊಳಿಸಬೇಕು.
।ತಿಮ್ಮನಾಯಕ ಸಿಂಗಟಗೆರೆ,ಬೆಂಗಳೂರು
‘ಜನಸಾಮಾನ್ಯರ ಹಣ ದುರ್ಬಳಕೆ’
ಹನಿ–ತುಂತುರು ನೀರಾವರಿ ಯೋಜನೆಗಳು ರೈತರಿಗೆ ಉಪಯೋಗವಾಗಲಿಲ್ಲ. ಯೋಜನೆಯ ಹೆಸರಿನಲ್ಲಿ ಹಣದ ದುರ್ಬಳಕೆ ನಡೆದಿದೆ. ಜನಸಾಮಾನ್ಯರ ಹಣ ಯೋಜನೆಗಳ ಹೆಸರಿನಲ್ಲಿ ದುರ್ಬಳಕೆ ಆಗುವುದಕ್ಕೆ ಕಡಿವಾಣ ಹಾಕಬೇಕು. ನೀರಿನ ಅಪವ್ಯಯ ತಪ್ಪಿಸಿ, ಕಡಿಮೆ ನೀರಿನಲ್ಲಿ ಹೆಚ್ಚು ಭೂಮಿಗೆ ನೀರು ಹರಿಸುವ ಸೂಕ್ಷ್ಮ, ವೈಜ್ಞಾನಿಕ ವ್ಯವಸ್ಥೆಯುಭ್ರಷ್ಟಾಚಾರ, ಕಮಿಷನ್ ದಂಧೆಯಿಂದಾಗಿ ಹಳ್ಳಹಿಡಿದಿರುವುದು ವಿಪರ್ಯಾಸ.
।ಎಂ.ಆರ್. ಬಾಲಕೃಷ್ಣ, ಸೀತಪ್ಪ ಬಡಾವಣೆ, ಬೆಂಗಳೂರು
‘ಚರ್ಚಿಸದೆ ಯೋಜನೆ ಅನುಷ್ಠಾನ’
ಹನಿ-ತುಂತುರು ಯೋಜನೆಯಡಿ ಹೊಲಗಳಿಗೆ ಪೈಪ್ ಲೈನ್ ಅಳವಡಿಸಿ, 5 ವರ್ಷಗಳಾದರೂ ನೀರು ಬಂದಿಲ್ಲ. ಯಂತ್ರೋಪಕರಣಗಳು ತುಕ್ಕುಹಿಡಿದಿವೆ. ಕೆಲವೊಂದು ಕಳುವಾಗಿವೆ. ಇದಕ್ಕೆ ಯಾರು ಹೊಣೆ? ರೈತರೊಂದಿಗೆ ಚರ್ಚಿಸದೆ ಯೋಜನೆ ಕೈಗೆತ್ತಿಕೊಂಡಿರುವುದು ಯೋಜನೆಯ ವೈಫಲ್ಯಕ್ಕೆ ಕಾರಣ. ಈ ಯೋಜನೆ ಬಗ್ಗೆ ಸರ್ಕಾರವುಸಮಗ್ರವಾಗಿ ಪರಿಶೀಲಿಸಿ, ಸಮಸ್ಯೆಗಳನ್ನು ಪರಿಹರಿಸಬೇಕು.
।ಪಿ. ಗಂಗಾಂತರಂಗ,ಚಿತ್ರದುರ್ಗ
‘ಯೋಜನೆ ಬಗ್ಗೆ ಮಾಹಿತಿ ಕೊರತೆ’
ಕೇಂದ್ರ ಸರ್ಕಾರವು ಕಡಿಮೆ ನೀರಿನಲ್ಲಿ ಹೆಚ್ಚಿನ ಭೂಮಿಗೆ ನೀರನ್ನು ಪೂರೈಸಲು ಇಸ್ರೇಲ್ ಮಾದರಿ ಅಳವಡಿಸಿಕೊಂಡಿದೆ. ಈ ಮಾದರಿಯನ್ನು ಬಲಿಷ್ಠಗೊಳಿಸಲು ಹನಿ–ತುಂತುರು ನೀರಾವರಿ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ.ರೈತರಿಗೆ ಸೂಕ್ತ ಮಾಹಿತಿ ನೀಡದಿರುವುದರಿಂದಾಗಿ ಶಿಗ್ಗಾವಿ, ರಾಮಥಾಳದಂತಹ ಯೋಜನೆಗಳು ವಿಫಲಗೊಂಡಿವೆ. ವ್ಯವಸ್ಥೆಯಲ್ಲಿನಭ್ರಷ್ಟಾಚಾರ ನಿರ್ಮೂಲನೆ ಮಾಡಿದರೆ ಮಾತ್ರ ಕೃಷಿ ಕ್ಷೇತ್ರವನ್ನು ಬಲಿಷ್ಠ ಗೊಳಿಸಲು ಸಾಧ್ಯ.
।ಬೀರಪ್ಪ ಬಸಾಪುರಿ,ಹುಕ್ಕೇರಿ
‘ರೈತರಿಗೆ ನೀರು ಕೊಡದ ಸರ್ಕಾರ’
ನಮ್ಮದು ಕೃಷಿ ಪ್ರಧಾನವಾದ ದೇಶ. ಹೀಗಾಗಿ, ಸರ್ಕಾರವು ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು. ಆದರೆ, ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿಯಿಂದಾಗಿ ಈ ಕ್ಷೇತ್ರವು ಕುಂಟುತ್ತಾ ಸಾಗಬೇಕಾಗಿದೆ.ಇದುವರೆಗೆ ಯಾವುದೇ ರಚನಾತ್ಮಕ ಕಾರ್ಯಕ್ರಮ ಸಫಲವಾಗಿಲ್ಲ. ಈ ಸಾಲಿಗೆ ಹನಿ ನೀರಾವರಿ ಯೋಜನೆಯೂ ಸೇರಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಕೊಡದ ಸರ್ಕಾರಗಳು ಬೇಕೆ? ರೈತರು ದಂಗೆ ಎಳುವ ಸಮಯ ಬಂದಿದೆ.
।ಎ.ವಿ.ಶಾಮರಾವ್
‘ಭ್ರಷ್ಟಾಚಾರ ಯೋಜನೆಗೆ ತೊಡಕು’
ಆರಂಭ ಶೂರತ್ವ ನಮ್ಮ ದೇಶಕ್ಕೆ ಅಂಟಿದ ಮಹಾರೋಗ. ಭಯೋತ್ಪಾದನೆಗಿಂತ ಭಯಾನಕವಾದ ಭ್ರಷ್ಟಾಚಾರದಿಂದ ನಮ್ಮ ಎಲ್ಲ ಯೋಜನೆಗಳನ್ನು ಹಳ್ಳ ಹಿಡಿದಿವೆ. ಅಂತೆಯೇ, ಈ ಹನಿ ನೀರಾವರಿ ಯೋಜನೆ ಕೂಡ ಇದೇ ಹಾದಿಯಲ್ಲಿ ಸಾಗಿದೆ. ಭ್ರಷ್ಟಾಚಾರದಿಂದ ರಾಜ್ಯ ಮುಕ್ತವಾದರೆ ಇಸ್ರೇಲ್ ಮಾದರಿಯ ಈ ಯೋಜನೆ ಕೂಡ ಯಶಸ್ವಿಯಾಗಿ, ಫಲ ನೀಡುತ್ತಿತ್ತು.
ನವ್ಯ ಶಿವದೇವ ಮೊಗಟಾ, ಯಲ್ಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.