ADVERTISEMENT

ಬಿಜೆಪಿ ಬಿಡುವವರ ಹೆಸರು ಹೇಳಿ: ಸೋಮಶೇಖರ್‌ಗೆ ಸವಾಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:25 IST
Last Updated 26 ಅಕ್ಟೋಬರ್ 2024, 0:25 IST
ಎಸ್‌.ಟಿ. ಸೋಮಶೇಖರ್
ಎಸ್‌.ಟಿ. ಸೋಮಶೇಖರ್   

ಬೆಂಗಳೂರು: ‘ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಶಾಸಕರ ಹೆಸರು ಹೇಳಿ‘ ಎಂದು ಶಾಸಕ ಎಸ್‌.ಟಿ.ಸೋಮಶೇಖರ್ ಅವರಿಗೆ ಬಿಜೆಪಿಯ ಮತ್ತೊಬ್ಬ ಶಾಸಕ ಬೈರತಿ ಬಸವರಾಜ ಸವಾಲು ಹಾಕಿದ್ದಾರೆ.

‘ಬೆಂಗಳೂರಿನ ಇಬ್ಬರು ಸೇರಿ ಒಟ್ಟು ಎಂಟು ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ’ ಎಂದು ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಗುರುವಾರ ನೀಡಿದ ಹೇಳಿಕೆ ನೀಡಿದ್ದರು. ಅದಕ್ಕೆ ಬೈರತಿ ಬಸವರಾಜ ಮತ್ತು ಸಂಸದ ಗೋವಿಂದ ಕಾರಜೋಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಸೇರಿದ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋಮಶೇಖರ್,  ‘ಬಿಜೆಪಿಯವರು ಯೋಗೇಶ್ವರ್ ಅವರನ್ನು ದುಡಿಸಿಕೊಂಡು ಕೈಬಿಟ್ಟಿದ್ದಾರೆ. ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಆರ್‌.ಅಶೋಕ ಅವರ ಮಾತು ಯಾರೂ ಕೇಳಬಾರದು. ನಾನಂತೂ ಪಕ್ಷದ ಶಿಸ್ತುಕ್ರಮಕ್ಕೆ ಹೆದರುವುದಿಲ್ಲ’ ಎಂದು ಹೇಳಿದ್ದರು.

ADVERTISEMENT

‘ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು. ಆದ್ದರಿಂದ ನಾನು ಬಿಜೆಪಿ ಶಾಸಕನಾಗಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಬೆಂಗಳೂರಿನ ಇಬ್ಬರು ಸೇರಿ ಒಟ್ಟು ಎಂಟು ಶಾಸಕರು ಕಾಂಗ್ರೆಸ್‌ ಸೇರುತ್ತಾರೆ’ ಎಂದು ಹೇಳಿದ್ದರು.

ರಾಜೀನಾಮೆ ನೀಡಿ ಮಾತನಾಡಲಿ: ಕಾರಜೋಳ

‘ಸೋಮಶೇಖರ್ ಬಿಜೆಪಿಯಿಂದ ಸಚಿವರು, ಶಾಸಕರಾಗಿ ಎಲ್ಲ ಅಧಿಕಾರ ಅನುಭವಿಸಿ ಪಕ್ಷದ ವಿರುದ್ಧವೇ ಹೇಳಿಕೆ ನೀಡುವುದು ಸರಿಯಲ್ಲ. ನೈತಿಕತೆ ಇದ್ದರೆ ಬಿಜೆಪಿಯ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಹೇಳಿಕೆ ನೀಡಲಿ’ ಎಂದು ಗೋವಿಂದ ಕಾರಜೋಳ ಅವರು ಹುಬ್ಬಳ್ಳಿಯಲ್ಲಿ ಶುಕ್ರವಾರ ಹೇಳಿದರು.

‘ಸೋಮಶೇಖರ್ ತಾಂತ್ರಿಕವಾಗಿ ಮಾತ್ರ ಬಿಜೆಪಿಯಲ್ಲಿ ಇದ್ದಾರೆ. ಬಿಜೆಪಿಯಿಂದ ಶಾಸಕರಾಗಿ ಆಯ್ಕೆ ಆಗಿರುವ ಅವರು, ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಂತರ ಅವರ ಹೇಳಿಕೆಗೆ ಮಹತ್ವ ಬರುತ್ತದೆ. ಮುಳುಗುವ ಹಡಗು ಕಾಂಗ್ರೆಸ್‌ಗೆ ಯಾರೂ ಹೋಗಲ್ಲ’ ಎಂದರು.

ಶಾಸಕ ಬೈರತಿ ಬಸವರಾಜ ಮಾತನಾಡಿ, ‘ಸೋಮಶೇಖರ್ ಅವರು ಊಹಾಪೋಹದ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷ ತೊರೆಯುವವರು ಯಾವ ವಿಧಾನಸಭಾ ಕ್ಷೇತ್ರದ ಶಾಸಕರು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿತ್ತು. ಕಾಂಗ್ರೆಸ್‌ನ ಹತ್ತು ಅಥವಾ ಹದಿನೈದು ಶಾಸಕರು ಬಿಜೆಪಿ ಸೇರುತ್ತಾರೆ ಎಂದು ನಾವು ಹೇಳಿದರೆ ಸಮಂಜಸವೇ’ ಎಂದು ಪ್ರಶ್ನಿಸಿದರು.

ಬೈರತಿ ಬಸವರಾಜ

‘ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ’

ಹುಬ್ಬಳ್ಳಿ: ‘ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತ ಮತ್ತು ನಾಯಕತ್ವ ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಬಿಜೆಪಿಯ ಶಾಸಕರು ಕಾಂಗ್ರೆಸ್‌ ಸೇರ್ಪಡೆ ಆಗುವ ಬಗ್ಗೆ ಸೋಮಶೇಖರ್ ನೀಡಿದ ಹೇಳಿಕೆಗೆ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ‘ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಅವರದ್ದೇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಅವರ ಜನ ವಿರೋಧಿ ನೀತಿ ಸಹಿಸಲಾಗದೆ ಬಹುತೇಕರು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ. ಎಂಟು ಮಂದಿ ಬರುತ್ತಾರೋ ಇಪ್ಪತ್ತೆಂಟು ಮಂದಿ ಬರುತ್ತಾರೋ ಅದು ದೊಡ್ಡ ವಿಷಯವಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.