ADVERTISEMENT

ಓದುವ ಅಭಿರುಚಿ ಬೆಳೆಸಲು ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 16:02 IST
Last Updated 3 ಸೆಪ್ಟೆಂಬರ್ 2024, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಥೆಗಳ ಮೂಲಕ ಶಾಲಾ ಮಕ್ಕಳಲ್ಲಿ ಓದುವ ಅಭಿರುಚಿ ಮೂಡಿಸಲು ಮುಂದಾಗಿರುವ ಶಾಲಾ ಶಿಕ್ಷಣ ಇಲಾಖೆ, ಅದಕ್ಕಾಗಿ ‘ಓದುವ ಅಭಿಯಾನ’ವನ್ನೇ ರೂಪಿಸಿದೆ.

ಸೆ.3ರಿಂದ 21 ದಿನಗಳು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 7ನೇ ತರಗತಿ ಮಕ್ಕಳಿಗೆ ಪ್ರತಿ ದಿನ ಕತೆ ಹೇಳುವ ಮೂಲಕ, ಮಕ್ಕಳಿಂದ ಕಥೆ ಹೇಳಿಸುವ ಮೂಲಕ ಓದುವ ಹವ್ಯಾಸ ರೂಢಿಸಲಾಗುತ್ತದೆ.

ಮಕ್ಕಳಲ್ಲಿ ಓದುವ ಕೌಶಲ, ಸಂಸ್ಕೃತಿ ಮತ್ತು ಅಭ್ಯಾಸ ಬೆಳೆಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,  ಓದುವ ಚಟುವಟಿಕೆಗಳನ್ನು ಶಿಕ್ಷಣ ಇಲಾಖೆಯೇ ಸಿದ್ಧಪಡಿಸಿದೆ. ವಿವಿಧ ವಿಷಯಗಳನ್ನು ಕಥೆಯ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಮಕ್ಕಳ ಸ್ನೇಹಿಯಾಗಿ ರೂಪಿಸಿರುವ ಪ್ರತಿ ಕಥೆಯನ್ನೂ ಪಿಡಿಎಫ್‌ ರೂಪದಲ್ಲಿ ನೀಡಲಾಗಿದೆ. ಪಟ್ಟಿಯಲ್ಲಿರುವ ಕಥೆಗಳನ್ನು ಬಳಸಿಕೊಂಡು ಪ್ರತಿ ದಿನ ಬೆಳಿಗ್ಗೆ 11ರಿಂದ 11.30ರವರೆಗೆ ಅರ್ಧ ಗಂಟೆ ವಾಚನ ನಡೆಯಲಿದೆ. 

ADVERTISEMENT

ಈ ಅಭಿಯಾನದಲ್ಲಿ ಮಕ್ಕಳು, ಶಿಕ್ಷಕರಷ್ಟೇ ಅಲ್ಲದೆ, ಕ್ಷೇತ್ರ, ವಿಭಾಗ, ಜಿಲ್ಲೆ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಸಹ ತಮ್ಮ ನೆಚ್ಚಿನ ಪುಸ್ತಕಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಲಿದ್ದಾರೆ. ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಓದುವ ಹವ್ಯಾಸ ರೂಢಿಸುವ ಜತೆಗೆ, ಬೆಳಗಿನ ಪ್ರಾರ್ಥನೆ, ಗ್ರಂಥಾಲಯದ ಅವಧಿಯಲ್ಲೂ ಸಮಯ ಮೀಸಲಿಡಬಹುದಾಗಿದೆ.    

‘ಸೆ. 3ಕ್ಕೆ ಆರಂಭವಾಗಿರುವ ಅಭಿಯಾನ 18ರವರೆಗೆ ಹಾಗೂ ಸೆ.26ರಿಂದ 30ರವರೆಗೆ  ನಡೆಯಲಿದೆ. ಒಟ್ಟು 21 ದಿನಗಳನ್ನು ಮೀಸಲಿಡಲಾಗಿದೆ. ಸೆ.19ರಿಂದ 25ರವರೆಗೆ ಮೌಲ್ಯಾಂಕನಗಳು ನಡೆಯಲಿವೆ. ಇಲಾಖೆಯ ಎಲ್ಲ ಶಿಕ್ಷಕರು, ಅಧಿಕಾರಿಗಳು ಈ ಅಭಿಯಾನದ ಭಾಗವಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಆಯುಕ್ತೆ ಬಿ.ಬಿ. ಕಾವೇರಿ ಮಾಹಿತಿ ನೀಡಿದರು.

ಪ್ರತಿದಿನ ಬೆಳಿಗ್ಗೆ 11ರಿಂದ ಕಥಾ ವಾಚನ 21 ದಿನ ನಡೆಯಲಿರುವ ಅಭಿಯಾನ ಸೆ.19ರಿಂದ ಮೌಲ್ಯಾಂಕನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.