ಮೈಸೂರು/ಬೆಳಗಾವಿ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ನೈಜ ಕಾರಣಗಳನ್ನು ಅನರ್ಹ ಗೊಂಡಿರುವ ಶಾಸಕರು ಬಹಿರಂಗಪಡಿಸಲಾರಂಭಿದ್ದಾರೆ. ಮೈಸೂರಿನಲ್ಲಿ ಅಡಗೂರು ಎಚ್.ವಿಶ್ವನಾಥ್ ಮತ್ತು ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಮತ್ತಷ್ಟು ವಿವರ ಬಹಿರಂಗಪಡಿಸಿದ್ದಾರೆ.
ಮೈಸೂರಿನಲ್ಲಿ ವಿಶ್ವನಾಥ್ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು 17 ಶಾಸಕರ ರಾಜೀನಾಮೆ ಕಾರಣ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರೇ ಸರ್ಕಾರ ಬೀಳಲು ಕಾರಣೀಭೂತರು’ ಎಂದಿದ್ದಾರೆ.
‘ಮೂವರು ಬರ್ತಾರೆ, ಹೋಗ್ತಾರೆ. ಇದರಿಂದ ಯಾವುದೇ ಸಾಧನೆ ಆಗದು. ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೇ ಮುಂದೆ ನಿಲ್ಲಿ’ ಎಂದು ಪ್ರಸಾದ್ ಕೇಳಿಕೊಂಡಿದ್ದರಿಂದ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದರು.
‘ಕಾಂಗ್ರೆಸ್ ಧುರೀಣರ ಸೊಕ್ಕಿನ ಮನೋಭಾವ, ದುರಹಂಕಾರದಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆಯೇ ಹೊರತು ಬಿಜೆಪಿಯವರ ಅಧಿಕಾರ ದಾಹದಿಂದಲ್ಲ. ಸಿದ್ದರಾಮಯ್ಯ ಅವರ ದರ್ಪದ ಮಾತುಗಳು, ಕೊಬ್ಬು
ಮತ್ತು ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದಿಂದ ಸರ್ಕಾರ ಬಿದ್ದಿದೆ’ ಎಂದು ರಮೇಶ ಜಾರಕಿಹೊಳಿ ಗೋಕಾಕದಲ್ಲಿ ತಿಳಿಸಿದರು.
‘2018ರಲ್ಲಿ ಗೆದ್ದ ಬಳಿಕ ಜಿಲ್ಲೆಯ ಕಾಂಗ್ರೆಸ್ ಶಾಸಕರು ನನ್ನ ವಿರುದ್ಧ ಕುತಂತ್ರ ಮಾಡಿದರು. ಡಿ.ಕೆ.ಶಿವ
ಕುಮಾರ್ ಕೈಯಲ್ಲೇ ಕಾಂಗ್ರೆಸ್ ಇತ್ತು. ಬಿಡದಿಯ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದಾಗಲೇ ಸರ್ಕಾರ ಕೆಡವಬೇಕೆಂದು ನಿರ್ಧರಿಸಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.