ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್) ಆನ್‌ಲೈನ್ ಮೂಲಕ ನಡೆಸುವುದು, ನೀಟ್ ಅಂಕಗಳ ಜೊತೆಗೆ ಆಯಾ ರಾಜ್ಯದ ಪಿಯು ಪರೀಕ್ಷೆಯ ಶೇ 50 ಅಂಕಗಳನ್ನು ಪರಿಗಣಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಮಾಡಿದೆ.
ಈ ಕುರಿತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಸುಧಾರಣಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದಿರುವ ವೇದಿಕೆಯ ಅಧ್ಯಕ್ಷ ಎಸ್. ಚಂದ್ರಶೇಖರ್ ಶೆಟ್ಟಿ, ನೀಟ್ ಉತ್ತಮ ಪರಿಕಲ್ಪನೆಯಾಗಿದೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲಿನ ದೈಹಿಕ, ಆರ್ಥಿಕ ಮತ್ತು ಮಾನಸಿಕ ಹೊರೆಯನ್ನು ಕಡಿಮೆ ಮಾಡಿದೆ. ಆದರೆ, ನೀಟ್ ಆರಂಭವಾಗಿ ಹಲವು ವರ್ಷಗಳು ಕಳೆದರೂ ಒಟ್ಟಾರೆ ಆಶಯ ಈಡೇರಿಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಮರೀಚಿಕೆಯಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಲಾಭದಾಯಕವಾಗಿದೆ. ವೈದ್ಯಕೀಯ ಶಿಕ್ಷಣದ ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ಪಿಯುಸಿಯಲ್ಲಿ ಗಳಿಸಿದ ಅರ್ಹತೆಯ ಅಂಕಗಳನ್ನು ಶೇ 35ಕ್ಕೆ ಇಳಿಸುವ ಮೂಲಕ ಕಳಪೆ ಸಾಧನೆ ಮಾಡಿದ ವಿದ್ಯಾರ್ಥಿಗಳೂ ಎಂಬಿಬಿಎಸ್ ಪ್ರವೇಶ ಪಡೆಯಲು ಸಹಾಯ ಮಾಡಲಾಗಿದೆ. ನೀಟ್ ಪಾವಿತ್ರ್ಯ ಉಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತರಬೇತಿ ಕೇಂದ್ರಗಳು, ಖಾಸಗಿ ಸಂಸ್ಥೆಗಳ ಲಾಬಿಯನ್ನು ನಿಯಂತ್ರಿಸಬೇಕು. ಭಾರತದಂತಹ ವಿಶಾಲ ರಾಷ್ಟ್ರಗಳಲ್ಲಿ ಆಫ್‌ಲೈನ್ ಪರೀಕ್ಷೆಗಳ ವಿಫಲತೆಯನ್ನು ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷಾ ಕಾರ್ಯದಲ್ಲಿ ಒಳಗೊಳ್ಳುವ ಎಲ್ಲರ ಹೊಣೆಗಾರಿಕೆ ನಿಗದಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಆನ್‌ಲೈನ್ ಪರೀಕ್ಷಾ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ನೀಟ್ ಅಂಕಗಳ ಜತೆಗೆ ಆಯಾ ರಾಜ್ಯಗಳು ನಡೆಸುವ ಬೋರ್ಡ್ ಪರೀಕ್ಷೆಗಳ ಶೇ 50ರಷ್ಟು ಪರಿಗಣಿಸಿ, ರ್‍ಯಾಂಕ್ ಪಟ್ಟಿ ಸಿದ್ಧಪಡಿಸಬೇಕು. ಆ ಮೂಲಕ 12ನೇ ತರಗತಿಯ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವೂ ಹೆಚ್ಚಾಗಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.