ನವದೆಹಲಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಗೆ ಮೇಲ್ವಿಚಾರಣಾ ಸಮಿತಿಯನ್ನು ಪುನರ್‌ರಚಿಸುವಂತೆ ಕರ್ನಾಟಕ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪುರಸ್ಕರಿಸಿದೆ.
ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ರಚನೆಯಾಗಿದ್ದ ಮೇಲ್ವಿಚಾರಣಾ ಸಮಿತಿಯಲ್ಲಿನ ಇಬ್ಬರು ಉಪಾಧಿವಂತರು ಮತ್ತು ಇಬ್ಬರು ವಿದ್ವಾಂಸರನ್ನು ಬದಲಾಯಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ದೇವಸ್ಥಾನದ ನಿರ್ವಹಣೆ ನೋಡಿಕೊಳ್ಳಲು ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಮೇಲುಸ್ತುವಾರಿ ಸಮಿತಿಯನ್ನು ಸುಪ್ರೀಂ ಕೋರ್ಟ್ 2021ರಲ್ಲಿ ನೇಮಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಹಾಗೂ ಮನೋಜ್ ಮಿಧ್ರಾ ಅವರ ಪೀಠವು ಶ್ರೀಕೃಷ್ಣ ಸಮಿತಿಯ ವರದಿಯನ್ನು ದಾಖಲಿಸಿಕೊಂಡಿತು.
ನ್ಯಾಯಮೂರ್ತಿ ಶ್ರೀಕೃಷ್ಣ ಅವರು ತಮ್ಮ ವರದಿಯಲ್ಲಿ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಎದುರಾದ ಅಡೆತಡೆಗಳನ್ನು ಉಲ್ಲೇಖಿಸಿದ್ದಾರೆ. ಸಮಿತಿಯ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ, ಬೆಂಬಲದ ಕೊರತೆ ಮತ್ತು ಪ್ರತಿ ಹಂತದಲ್ಲೂ ಅಡ್ಡಿಯಿಂದಾಗಿ ಅಧ್ಯಕ್ಷರಾಗಿ ಪರಿಣಾಮಕಾರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.
‘ಸಮಿತಿಯ ವ್ಯವಹಾರಗಳನ್ನು ನಡೆಸಲು ನ್ಯಾಯಾಲಯವು ಯಾವುದೇ ಕಾರ್ಯವಿಧಾನದ ನಿಯಮಗಳನ್ನು ರೂಪಿಸಿಲ್ಲವಾದ್ದರಿಂದ, ನಿರ್ಧಾರಗಳನ್ನು ಬಹುಮತದಿಂದ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಕರಣವೇನು?: ಗೋಕರ್ಣದ ‘ಶ್ರೀ ಮಹಾಬಲೇಶ್ವರ ದೇವಸ್ಥಾನ‘ದ ಡಿ–ನೋಟಿಫೈ ಪ್ರಕರಣದ ಸಿವಿಲ್ ದಾವೆಯಲ್ಲಿ ಸುಪ್ರೀಂ ಕೋರ್ಟ್ 2021ರ ಏಪ್ರಿಲ್ 19ರಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶದ ಅನುಸಾರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ಬಿ.ಎನ್.ಶ್ರೀಕೃಷ್ಣ ನೇತೃತ್ವದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು.
ಏತನ್ಮಧ್ಯೆ, 2023ರ ರಾಜ್ಯ ವಿಧಾನಸಭೆ ಚುನಾವಣೆ ನಂತರ ನೂತನ ರಾಜ್ಯ ಸರ್ಕಾರ ಎಲ್ಲ ನಾಮ ನಿರ್ದೇಶನಗಳನ್ನು 2023ರ ಮೇ 22ರಂದು ರದ್ದುಪಡಿಸಿ ಆದೇಶಿಸಿತ್ತು. ಈ ಆದೇಶದನ್ವಯ ಗೋಕರ್ಣ ದೇವಾಲಯದ ಸಮಿತಿಯಲ್ಲಿದ್ದ ಉಪಾಧಿವಂತರಾದ ಮಹಾಬಲ ಉಪಾಧ್ಯೆ, ದತ್ತಾತ್ರೇಯ ಹಿರೇಗಂಗೆ ಮತ್ತು ವಿದ್ವಾಂಸರಾದ ಪರಮೇಶ್ವರ ಮಾರ್ಕಾಂಡೆ ಹಾಗೂ ಮುರಳೀಧರ ಪ್ರಭು ಅವರನ್ನು ಕೈಬಿಡಲಾಗಿತ್ತು.
ಉಪಾಧಿವಂತರ ಸ್ಥಾನಕ್ಕೆ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ವಿದ್ವಾಂಸರ ಸ್ಥಾನಕ್ಕೆ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಹಾಗೂ ಮಹೇಶ್ ಗಣೇಶ್ ಹಿರೇಗಂಗೆ ಅವರನ್ನು ನಾಮ ನಿರ್ದೇಶನ ಮಾಡಿತ್ತು. ಈ ಕುರಿತಂತೆ ಕಂದಾಯ ಇಲಾಖೆ ಹೊರಡಿಸಿದ್ದ ಆದೇಶವನ್ನು ರಾಮಚಂದ್ರಾಪುರ ಮಠವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.