ಬೆಂಗಳೂರು: ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದಲ್ಲಿ 400 ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಪಶುಸಂಗೋಪನೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದರೆ, ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ಸಹಿತ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಕೆಪಿಎಸ್‌ಸಿ ಪಟ್ಟು ಹಿಡಿದಿದೆ.
ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು–2021ರ ನಿಯಮ 5 (ಡಿ) ಪ್ರಕಾರ ಉದ್ಯೋಗಾಕಾಂಕ್ಷಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ 400 ಹುದ್ದೆಗಳನ್ನು ಭರ್ತಿ ಮಾಡುವಂತೆ ಇಲಾಖೆಯು ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಇದನ್ನು ಪರಿಶೀಲಿಸಿದ ಆಯೋಗ, ಇಲಾಖೆಯ ಕಾರ್ಯದರ್ಶಿಗೆ ಆಗಸ್ಟ್ 8ರಂದು ಪತ್ರ ಬರೆದು, ‘ಈ ಹುದ್ದೆಗಳು ಗ್ರೂಪ್ ‘ಎ’ ವರ್ಗದ ಹುದ್ದೆಗಳಾಗಿವೆ. ಹೀಗಾಗಿ, ಈ ಹುದ್ದೆಗಳ ಭರ್ತಿಗೆ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ಸಹಿತ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದು ಸೂಕ್ತ. ಹಿಂದೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕು’ ಎಂದು ಕೋರಿದೆ.
ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಮಾರ್ಚ್ 21ರಂದೇ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ವಿಧಾನಸಭೆ ಚುನಾವಣೆ ಘೋಷಣೆ ಆಗಿದ್ದರಿಂದ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಮಧ್ಯೆ, ಮುಸ್ಲಿಮರಿಗೆ ನೀಡಿದ್ದ ಶೇ 4 ಮೀಸಲಾತಿ ರದ್ದುಪಡಿಸುವ ಜೊತೆಗೆ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಶೇ 10 ಮೀಸಲಾತಿ ಜೊತೆಗೆ ಒಟ್ಟು ಮೀಸಲಾತಿ ಪ್ರಮಾಣವನ್ನು ಮರು ಹಂಚಿಕೆ ಮಾಡಿ ಮಾರ್ಚ್ 27ರಂದು ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ, ನೇಮಕಾತಿಗೆ ಯಾವ ಮೀಸಲಾತಿ ನೀತಿ ಅನ್ವಯಿಸಬೇಕು ಎಂಬ ಬಗ್ಗೆ ಸ್ಪಷ್ಟನೆ ಕೋರಿ ಏಪ್ರಿಲ್ 28ರಂದು ಇಲಾಖೆಗೆ ಕೆಪಿಎಸ್‌ಸಿ ಪ್ರಸ್ತಾವನೆಯನ್ನು ಮರಳಿಸಿತ್ತು.
ನೇಮಕಾತಿಯಲ್ಲಿ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಕೆಪಿಎಸ್‌ಸಿಗೆ ಸ್ಪಷ್ಟನೆ ನೀಡಿರುವ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೂನ್ 19ರಂದು ಹೊರಡಿಸಿರುವ ಅನಧಿಕೃತ ಟಿಪ್ಪಣಿಯನ್ನು ಉಲ್ಲೇಸಿ, ‘ಮುಸ್ಲಿಮರಿಗೆ ‘ಪ್ರವರ್ಗ 2ಬಿ’ ಅಡಿ ನೀಡಿದ್ದ ಮೀಸಲಾತಿ ರದ್ದುಪಡಿಸಿರುವ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗುವ ಅಥವಾ ಮುಂದಿನ ಆದೇಶದವರೆಗೆ 2002 ಮಾರ್ಚ್ 30ರ ಆದೇಶದಲ್ಲಿರುವ ಮೀಸಲಾತಿ ವಿಧಾನವೇ ಅನ್ವಯವಾಗಲಿದೆ’ ಎಂದು ಸ್ಪಷ್ಟನೆ ನೀಡಿದೆ. ಹೀಗಾಗಿ, ಹಳೆ ಮೀಸಲಾತಿ ವಿಧಾನದಲ್ಲಿಯೇ ನೇಮಕಾತಿ ಅಧಿಸೂಚನೆ ಹೊರಡಿಸಲು ಕೆಪಿಎಸ್‌ಸಿ ಮುಂದಾಗಿದೆ.
ಈ ಹುದ್ದೆಗಳಿಗೆ ಸಂದರ್ಶನ ಅಗತ್ಯವಿದೆ ಎಂದು ಆಯೋಗದ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯ ಆಧರಿಸಿ ಇಲಾಖೆ ಕಾರ್ಯದರ್ಶಿಗೆ ಕೆಪಿಎಸ್‌ಸಿ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ನೇಮಕಾತಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಗ್ರೂಪ್ ‘ಎ’ ಹುದ್ದೆಗೆ ಸಂದರ್ಶನ ಪ್ರಕ್ರಿಯೆ ನಡೆಸಬೇಕೆಂದು ಕೆಪಿಎಸ್‌ಸಿಯಿಂದ ಪತ್ರ ಬಂದಿದೆ.–ಸಲ್ಮಾ ಕೆ. ಫಾಹಿಮ್ ಕಾರ್ಯದರ್ಶಿ ಪಶು ಸಂಗೋಪನೆ ಇಲಾಖೆ
ಪಶು ವೈದ್ಯಾಧಿಕಾರಿ ಹುದ್ದೆಯು ಗ್ರೂಪ್ ‘ಎ’ ಆಗಿರುವುದರಿಂದ ಸಂದರ್ಶನ ನಡೆಸುವಂತೆ ಆಯೋಗ ನಿರ್ಣಯಿಸಿದೆ. ಹೀಗಾಗಿ ನೇಮಕಾತಿ ಪ್ರಸ್ತಾವನೆ ಮರು ಪರಿಶೀಲಿಸಲು ಇಲಾಖೆಗೆ ಮರಳಿಸಲಾಗಿದೆ.–ವಿಕಾಸ್ ಕಿಶೋರ್ ಸುರಳ್ಕರ್ ಕಾರ್ಯದರ್ಶಿ ಕೆಪಿಎಸ್‌ಸಿ
ಆಯ್ಕೆ ನಿಯಮದಲ್ಲಿ ಏನಿದೆ?
‘ನೇರ ನೇಮಕಾತಿ ನಿಯಮಗಳು–2021’ರಲ್ಲಿ ಅಭ್ಯರ್ಥಿಗಳ ಆಯ್ಕೆ ವಿಧಾನವನ್ನು ವಿವರಿಸಲಾಗಿದೆ. ಅದರಲ್ಲಿರುವ ನಿಯಮ 5 (ಡಿ) ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ‘ವೈದ್ಯಕೀಯ ಅಧಿಕಾರಿಗಳ ಪಶು ವೈದ್ಯಾಧಿಕಾರಿಗಳ ಎಂಜಿನಿಯರ್ ಹುದ್ದೆಗಳ ಮತ್ತು ಸರ್ಕಾರವು ಅಧಿಸೂಚಿಸಬಹುದಾದ ಇತರ ಹುದ್ದೆಗಳ ಮತ್ತು ಆಯ್ಕೆ ವಿಧಾನದ ಗ್ರೂಪ್ ‘ಸಿ’ ಮತ್ತು ‘ಡಿ‘ಯ ಎಲ್ಲ ಹುದ್ದೆಗಳ ಪ್ರವೇಶ ಹಂತದ ಸಂದರ್ಭದಲ್ಲಿ ಸಂದರ್ಶನವನ್ನು ಒಳಗೊಂಡಿರತಕ್ಕದ್ದಲ್ಲ’ ಎಂದೂ ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.