ಬೆಂಗಳೂರು: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಕಾಲಮಿತಿಯ ಒಳಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪ್ರತಿಭಾವಂತ ಶಿಕ್ಷಕರು ಇಲಾಖೆಯ ಶಕ್ತಿ. ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡರೂ, ಅದು ತಾತ್ಕಾಲಿಕ ಪರಿಹಾರವಷ್ಟೆ. ಅದಕ್ಕಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲೇಬೇಕಿದೆ. ಹಂತಹಂತವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಪಠ್ಯ ಪುಸ್ತಕ ಬದಲಾವಣೆ ವಿಚಾರದಲ್ಲಿ ಸರ್ಕಾರ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಬಿಜೆಪಿ ಸರ್ಕಾರ ಪಠ್ಯ ಬದಲಾವಣೆ ಮಾಡಿ ವಿವಾದ ಸೃಷ್ಟಿಸಿತ್ತು. ಈಗ ಕಾಂಗ್ರೆಸ್ ಸಹ ಅದೇ ದಾರಿಯಲ್ಲಿ ಸಾಗುತ್ತಿದೆ.–ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ.
ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿದ್ದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾದ 13,351 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. ಕೆಲವರು ಮತ್ತೆ ಕೋರ್ಟ್ ಮೊರೆ ಹೋಗಿದ್ದು, ಸ್ಥಳ ನಿಯೋಜನೆ ಆದೇಶ ನೀಡಲು ವಿಳಂಬವಾಗಿದೆ. ಕಾನೂನು ನೆರವು ಪಡೆದು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.