ಬೆಂಗಳೂರು: ಮೆಕ್ಯಾನಿಕ್, ಸಹಾಯಕ ನೈರ್ಮಲ್ಯ ನಿರೀಕ್ಷಕ, ಸ್ವಚ್ಛತಾ ಸಿಬ್ಬಂದಿ, ಕೂಲಿ, ತೋಟಗಾರಿಕಾ ಸಿಬ್ಬಂದಿ ಮತ್ತು ಪರಿಚಾರಕರ ನೇಮಕಾತಿಯಲ್ಲಿ ಹಣ ಪಡೆದು, ಅಕ್ರಮ ಎಸಗಿರುವ ಆರೋಪದ ಮೇಲೆ ಬೆಳಗಾವಿ ದಂಡು ಮಂಡಳಿ 19 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
2022–23ರಲ್ಲಿ 31 ಹುದ್ದೆಗಳ ಭರ್ತಿಗೆ ನಡೆದ ಪ್ರಕ್ರಿಯೆಯಲ್ಲಿ ₹15 ಲಕ್ಷದಿಂದ ₹25 ಲಕ್ಷಗಳವರೆಗೆ ಲಂಚ ಪಡೆದು ಅನರ್ಹರನ್ನು ನೇಮಕ ಮಾಡಿಕೊಂಡ ಆರೋಪದ ಕುರಿತು ಸಿಬಿಐ ಪ್ರಾಥಮಿಕ ವಿಚಾರಣೆ ನಡೆಸಿತ್ತು. ಆರೋಪಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಂತಹ ಸಾಕ್ಷ್ಯಗಳು ಪ್ರಾಥಮಿಕ ವಿಚಾರಣೆ ವೇಳೆ ಲಭಿಸಿದ್ದವು. ಮೇ 25ರಂದು ಎಫ್‌ಐಆರ್ ದಾಖಲಿಸಿರುವ ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ಘಟಕ ತನಿಖೆ ಆರಂಭಿಸಿದೆ.
ಬೆಳಗಾವಿ ದಂಡು ಮಂಡಳಿಯ ಕಚೇರಿ ಅಧೀಕ್ಷಕ ಮಹಾಲಿಂಗೇಶ್ವರ್ ವೈ. ತಾಳುಕರ್, ಕಂಪ್ಯೂಟರ್ ಪ್ರೋಗ್ರಾಮರ್ ಬಸವರಾಜ್ ಎಸ್. ಗುಡೋದಗಿ, ಡೇಟಾ ಎಂಟ್ರಿ ಆಪರೇಟರ್ ಪ್ರಕಾಶ್ ಸಿ. ಗೌಂಡಡ್ಕರ್, ದಂಡು ಮಂಡಳಿಯ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪರಶುರಾಮ್ ಎಸ್. ಬಿರ್ಜೆ, ಸಹಾಯಕ ಶಿಕ್ಷಕ ಉದಯ್ ಎಸ್. ಪಾಟೀಲ್, ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದ 14 ಅಭ್ಯರ್ಥಿಗಳು ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
31 ಹುದ್ದೆಗಳ ಭರ್ತಿಗೆ 2022–23ರಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಳಗಾವಿ ದಂಡು ಮಂಡಳಿಯ ನಾಮನಿರ್ದೇಶಿತ ಸದಸ್ಯ ಸುಧೀರ್ ಕೆ. ತುಪೇಕರ್ 2023ರ ಆಗಸ್ಟ್‌ನಲ್ಲಿ ಸಿಬಿಐಗೆ ದೂರು ನೀಡಿದ್ದರು. ಸಿಬಿಐ ಬೆಂಗಳೂರು ಎಸಿಬಿಯ ಪೊಲೀಸ್ ಇನ್‌ಸ್ಪೆಕ್ಟರ್ ಸೌಭಿಕ್ ಕುಮಾರ್ ಭಕತ್ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು.
‘ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ದಿವಂಗತ ಆನಂದ್ ಕೆ. ನೇಮಕಾತಿ ಪ್ರಕ್ರಿಯೆಯ ನಿಯಂತ್ರಣ ಹೊಂದಿದ್ದರು. ಅವರು ಇತರ ಆರೋಪಿಗಳ ಜತೆ ಸೇರಿ ಸಂಚು ನಡೆಸಿ ₹15 ಲಕ್ಷದಿಂದ ₹25 ಲಕ್ಷದವರೆಗೆ ಲಂಚ ಪಡೆದು ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂಬ ಉಲ್ಲೇಖ ಎಫ್‌ಐಆರ್‌ನಲ್ಲಿದೆ.
‘ಹಿಂದಿ ಭಾಷೆಯಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ, ಬಹುತೇಕ ಅಭ್ಯರ್ಥಿಗಳಿಗೆ ಹಿಂದಿ ಭಾಷೆಯ ಪತ್ರಿಕೆಯನ್ನು ಓದಲು ಬರುತ್ತಿರಲಿಲ್ಲ. ಸ್ವಚ್ಛತಾ ಸಿಬ್ಬಂದಿ ಹುದ್ದೆಗೆ ನೇಮಕಗೊಂಡಿರುವ ಜ್ಯೋತಿಬಾ ಎಂ. ಕಮಾಕರ್ ಎಂಬವರಿಗೆ ಪ್ರಶ್ನೆ ಪತ್ರಿಕೆ ನೀಡಿದಾಗ ಅವರಿಗೆ ಓದಲೂ ಬಾರದಿರುವುದು ಕಂಡುಬಂದಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು ಅಥವಾ ಅನರ್ಹಗೊಳಿಸಲಾಗಿತ್ತು. ದೇಶದ ವಿವಿಧೆಡೆಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಹಾಜರಾಗಿದ್ದರೂ, ಬೆಳಗಾವಿ ಮತ್ತು ಸುತ್ತಮುತ್ತಲಿನ ಅಭ್ಯರ್ಥಿಗಳನ್ನು ಮಾತ್ರವೇ ಆಯ್ಕೆ ಮಾಡಿರುವುದು ಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.