ಬೆಂಗಳೂರು: ಕಾಲಮಿತಿ ವೇತನ ಬಡ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಬಡ್ತಿ ಪಡೆಯದ ವೇತನ ತಾರತಮ್ಯ ಸರಿಪಡಿಸುವಂತೆ ವಿಧಾನಪರಿಷತ್‌ನಲ್ಲಿ ಸೋಮವಾರ ಬಿಜೆಪಿಯ ಎಸ್.ವಿ. ಸಂಕನೂರು ಮತ್ತು ಶಶೀಲ್ ಜಿ. ನಮೋಶಿ ಒತ್ತಾಯಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘10, 20, 30 ವರ್ಷಗಳ ಕರ್ತವ್ಯದ ಆಧಾರದ ಮೇಲೆ ವೇತನ ಬಡ್ತಿ ಪಡೆದಿದ್ದರೂ ಕಡಿಮೆ ವೇತನ ದೊರೆಯುತ್ತಿದೆ. 1983ರ ನಿಯಮಾವಳಿಗಳನ್ನು ಅನುಸರಿಸುತ್ತಿರುವುದರಿಂದ ಈ ರೀತಿ ತಾರತಮ್ಯವಾಗುತ್ತಿದೆ. ಇದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
’ಕಿರಿಯರಿಗಿಂತ ಹಿರಿಯ ಶಿಕ್ಷಕರಿಗೆ ಕಡಿಮೆ ವೇತನ ದೊರೆ ಯುತ್ತಿದೆ. ಇದು ಶಿಕ್ಷಕರಿಗೂ ಮಾನ ಸಿಕ ಹಿಂಸೆಯಾಗಿದೆ. ಇದುವರೆಗಿನ ಎಲ್ಲ ಶಿಕ್ಷಣ ಸಚಿವರು ಈ ತಾರತಮ್ಯ ಇರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಯಾವುದೇ ಬದಲಾವಣೆಯಾಗಿಲ್ಲ’ ಎಂದು ದೂರಿದರು.
ಈ ಬಗ್ಗೆ ಉತ್ತರ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ‘ಬಡ್ತಿ ಪಡೆದ ಶಿಕ್ಷಕರಿಗೆ ವೇತನದಲ್ಲಿ ಅನ್ಯಾಯವಾಗುತ್ತಿದೆ. ಆರನೇ ವೇತನ ಆಯೋಗದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈಗ ಏಳನೇ ವೇತನ ಆಯೋಗದಲ್ಲಿ ವ್ಯತ್ಯಾಸಗಳನ್ನು ಸರಿಪಡಿಸಲಾಗುವುದು. ಇಲ್ಲದಿದ್ದರೆ ನಿಯಮಾವಳಿಗಳನ್ನು ಬದಲಾಯಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.