ADVERTISEMENT

ಕೆಂಪು ಮೆಣಸಿನಕಾಯಿ ಬೆಲೆ ಕುಸಿತ: ಆತಂಕದಲ್ಲಿ ರೈತರು

ಗುಣಮಟ್ಟ ಕಳೆದುಕೊಂಡು ಕಪ್ಪು ಬಣ್ಣಕ್ಕೆ ಪರಿವರ್ತನೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 1 ಜುಲೈ 2024, 20:21 IST
Last Updated 1 ಜುಲೈ 2024, 20:21 IST
   

ಗದಗ: ಉತ್ತಮ ಬೆಲೆ ನಿರೀಕ್ಷೆಯಲ್ಲಿ ಮನೆಗಳಲ್ಲಿ‌ ಮೂರು ತಿಂಗಳಿನಿಂದ ಸಂಗ್ರಹಿಸಿ ಇಡಲಾಗಿದ್ದ ಕೆಂಪು ಮೆಣಸಿನಕಾಯಿ ಗುಣಮಟ್ಟ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಆತಂಕಗೊಂಡಿರುವ ರೈತರಿಗೆ ದಿಕ್ಕೇ ತೋಚದಾಗಿದೆ.

ಗದಗ ಜಿಲ್ಲೆ ರೋಣ ತಾಲ್ಲೂಕಿನ ಬೆಳವಣಿಕಿ, ಯಾವಗಲ್‌, ಕೌಜಗೇರಿ ಸೇರಿ ಸುತ್ತಮುತ್ತಲಿನ ರೈತರು ಒಣಬೇಸಾಯದಲ್ಲಿ ‘ಅಣ್ಣಿಗೇರಿ ಡಿಲಕ್ಸ್‌’ (ಜವಾರಿ) ತಳಿಯ ಕೆಂಪುಮೆಣಸಿನಕಾಯಿ ಬೆಳೆದಿದ್ದರು. ಎಕರೆಗೆ ₹30 ಸಾವಿರ ಖರ್ಚು ಆಗಿತ್ತು. ಬೆಳೆ ಬರುವುದಕ್ಕೂ ಮುನ್ನ ಕ್ವಿಂಟಲ್‌ಗೆ ₹45 ಸಾವಿರ ಇದ್ದ ಕೆಂಪುಮೆಣಸಿನಕಾಯಿ ದರ ಈಗ ₹8,500ಕ್ಕೆ ಕುಸಿದಿದೆ. ಬೆಳೆಯನ್ನು ಇಟ್ಟುಕೊಳ್ಳಲು ಮತ್ತು ಮಾರಲು ಆಗದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. 

‘ರೋಣ ತಾಲ್ಲೂಕಿನಲ್ಲಿ ಇದೇ ವರ್ಷ ಜನವರಿಯಲ್ಲಿ ಜವಾರಿ ತಳಿಯ ಕೆಂಪು ಮೆಣಸಿನಕಾಯಿ ಕ್ವಿಂಟಲ್‌ಗೆ ₹35 ಸಾವಿರಕ್ಕೆ ಮಾರಾಟವಾಗಿತ್ತು. ನಂತರದ ದಿನಗಳಲ್ಲಿ ಬೆಲೆ ಕುಸಿಯತೊಡಗಿತು. ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಬೆಳೆಯನ್ನು ಮನೆಯಲ್ಲೇ ಸಂಗ್ರಹಿಸಿ ಇಟ್ಟೆವು. ಆದರೆ, ಈಗ ಬೆಳೆಯನ್ನು ಕ್ವಿಂಟಲ್‌ಗೆ ₹8,500ರ ದರಕ್ಕೆ ಕೇಳುತ್ತಾರೆ’ ಎಂದು ಕೌಜಗೇರಿ ರೈತ ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾನು 40 ಎಕರೆಯಲ್ಲಿ ಕೆಂಪುಮೆಣಸಿನಕಾಯಿ ಬೆಳೆದಿದ್ದು, ಈಗಿನ ಬೆಲೆಗೆ ಮಾರಿದರೆ ಹಾಕಿದ ಖರ್ಚು ಕೂಡ ಬರಲ್ಲ. ಸರ್ಕಾರ ಸ್ಥಳೀಯ ಮೆಣಸಿನಕಾಯಿ ಬೆಳೆಗಾರರ ಹಿತ ಕಾಯಬೇಕು. ಅಷ್ಟೂ ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ಮುಂದಾಗಬೇಕು’ ಎಂದು ಬೆಳವಣಕಿ ಗ್ರಾಮದ ರೈತ ಮಲ್ಲಿಕಾರ್ಜುನ ದಾದ್ಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.