ಮೈಸೂರು: ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸುತ್ತಿರುವ ಅಕ್ಕಿಯ ಪ್ರಮಾಣವನ್ನು ರಾಜ್ಯ ಸರ್ಕಾರ ಮತ್ತೆ ಕಡಿತಗೊಳಿಸಿದೆ.
ಈ ವ್ಯತ್ಯಾಸ ಸರಿದೂಗಿಸಲು ದಕ್ಷಿಣ ಕರ್ನಾಟಕದಲ್ಲಿ ರಾಗಿ, ಉತ್ತರ ಕರ್ನಾಟಕದಲ್ಲಿ ಜೋಳ ನೀಡುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಅಕ್ಕಿ ಪ್ರಮಾಣ ಕಡಿತಗೊಳಿಸಿರುವುದಕ್ಕೆ ಕೆಲ ಕಾರ್ಡ್ ದಾರರಿಂದ ಆಕ್ಷೇಪ ವ್ಯಕ್ತವಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ಈ ಹಿಂದೆ 5 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ವಿತರಿಸಲಾಗುತಿತ್ತು. ಹೊಸ ಪದ್ಧತಿಯಲ್ಲಿ ಈ ತಿಂಗಳಿನಿಂದ 2 ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ ಮತ್ತು 2 ಕೆ.ಜಿ ಗೋಧಿ ನೀಡಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗೆ 15 ಕೆ.ಜಿ ಅಕ್ಕಿ, 20 ಕೆ.ಜಿ ರಾಗಿ ಪೂರೈಸಲಾಗುತ್ತಿದೆ.
‘ರಾಗಿ ಬದಲು ಅಕ್ಕಿಯನ್ನೇ ನೀಡಲಿ. ರಾಗಿಯನ್ನು ಕಡ್ಡಾಯವಾಗಿ ನೀಡ ಬೇಕೆಂದರೆ ಅಕ್ಕಿಯ ಪ್ರಮಾಣ ಹೆಚ್ಚಿಸ ಬೇಕು’ ಎಂದು ಕಾರ್ಡ್‌ದಾರರು ಆಗ್ರಹಿಸಿದ್ದಾರೆ.
‘ಅಕ್ಕಿಯನ್ನು ನಾವು ಛತ್ತೀಸಗಡ, ಹರಿಯಾಣದಿಂದ ತರುತ್ತಿದ್ದು, ಅಲ್ಲಿಯ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ. ಹೀಗಾಗಿ, ನಮ್ಮ ರೈತರಿಗೆ ಅನುಕೂಲ ಮಾಡಿಕೊಡಲು ಸ್ಥಳೀಯವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಿದ ರಾಗಿಯನ್ನು ಸ್ಥಳೀಯ ಕಾರ್ಡ್‌ದಾರ
ರಿಗೆ ವಿತರಿಸಲಾಗುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಪಿ.ಶಿವಣ್ಣ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದರು.
ಸರಿಯಾದ ಕ್ರಮ ಅಲ್ಲ: ‘ನಿತ್ಯ ಬಳಕೆಯ ವಸ್ತುಗಳ ಬೆಲೆ ಏರುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಡುಗೆ ಎಣ್ಣೆ ದರ ಹೆಚ್ಚಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಬಲ ಬೆಲೆ ಯಲ್ಲಿ ರಾಗಿ, ಭತ್ತ ಖರೀದಿಸುತ್ತಿರುವುದು ಒಳ್ಳೆಯ ವಿಚಾರ. ಆದರೆ, ಒಂದನ್ನು ಕಡಿತಗೊಳಿಸಿ ಮತ್ತೊಂದನ್ನು ನೀಡು ವುದು ಸರಿಯಲ್ಲ’ ಎಂದು ರೈತ ನಾಯಕಿ ಸುನಂದಾ ಜಯರಾಂ ಹೇಳಿದರು.
‘ಮೈಸೂರು ಜಿಲ್ಲೆಯ ಹಲವೆಡೆ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ರಾಗಿ ಬೆಳೆದವರಿಗೆ ಮತ್ತೆ ರಾಗಿ
ಕೊಟ್ಟರೆ ಏನು ಪ್ರಯೋಜನ? ಹಳೆಯ ಪದ್ಧತಿಯೇ ಇರಲಿ’ ಎಂದು ಬಿಪಿಎಲ್ ಕಾರ್ಡ್‌ದಾರ, ರೈತ ಅರ್ಜುನಹಳ್ಳಿ ರಾಂಪ್ರಸಾದ್ ಒತ್ತಾಯಿಸಿದ್ದಾರೆ.
***
ರಾಗಿ, ಜೋಳ ಬೆಳೆಯುವ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರಕ್ಕೆ ಬರಲಾಗಿದೆ. ಕಾರ್ಡ್‌ದಾರರಿಗೂ ಸಹಾಯವಾಗಲಿದೆ
- ಪಿ.ಶಿವಣ್ಣ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಕೋವಿಡ್ ಸಂಕಷ್ಟ ಕಾಲದಲ್ಲಿ ಅಕ್ಕಿ ಪ್ರಮಾಣ ಕಡಿತ ಮಾಡಬಾರದಿತ್ತು. ಆದೇಶ ಹಿಂಪಡೆದು 5 ಕೆ.ಜಿ ಅಕ್ಕಿ ಜೊತೆಗೆ ಹೆಚ್ಚುವರಿಯಾಗಿ ರಾಗಿಯನ್ನೂ ಕೊಡಲಿ
- ಸುನಂದಾ ಜಯರಾಂ, ರೈತ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.