ADVERTISEMENT

ಐಚ್ಛಿಕ ಕನ್ನಡ ಬೋಧನಾ ಅವಧಿ ಕಡಿತ; ಉನ್ನತ ಶಿಕ್ಷಣ ಸಚಿವರಿಗೆ ಬರಗೂರು ಪತ್ರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 21:14 IST
Last Updated 4 ಜುಲೈ 2024, 21:14 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪದವಿ ತರಗತಿಗಳಲ್ಲಿ ಐಚ್ಛಿಕ ಕನ್ನಡದ ಬೋಧನಾ ಅವಧಿಯನ್ನು ಮೊದಲಿನಂತೆ ವಾರಕ್ಕೆ ಆರು ಗಂಟೆ ನಿಗದಿ ಮಾಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಮತ್ತೊಂದು ಪತ್ರ ಬರೆದಿರುವ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಅದಕ್ಕೂ ಪೂರ್ವದಲ್ಲಿ ಐಚ್ಛಿಕ ಕನ್ನಡದ ಬೋಧನಾ ಅವಧಿ ವಾರಕ್ಕೆ ಆರು ಗಂಟೆಯೇ ಇತ್ತು. ರಾಜ್ಯ ಶಿಕ್ಷಣ ನೀತಿ ಆಯೋಗ ಮಧ್ಯಂತರ ವರದಿ ನೀಡಿದ ನಂತರ ಬಹುತೇಕ ವಿಶ್ವವಿದ್ಯಾಲಯಗಳು ಐದು ಗಂಟೆಗೆ ಇಳಿಸಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದಲ್ಲೇ ಕನ್ನಡ ಬೋಧನೆಗೆ ಅನ್ಯಾಯವಾಗುವುದು ಅಕ್ಷಮ್ಯ. ಹಿಂದಿಗಿಂತ ಹೆಚ್ಚು ಬೋಧನಾ ಅವಧಿ ನಿಗದಿ ಮಾಡುವ ಬದಲು ಕಡಿಮೆ ಮಾಡುವವರ ಮನೋಧರ್ಮ ಸರ್ಕಾರದ ಕನ್ನಡಪರ ನೀತಿಗೆ ವಿರುದ್ಧವಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು. ಇತಿಹಾಸ ವಿಷಯದ ಬೋಧನಾ ಅವಧಿಯನ್ನೂ 22 ಗಂಟೆಗಳಿಂದ 18 ಗಂಟೆಗೆ ಇಳಿಸಲಾಗಿದೆ. ಎನ್‌ಇಪಿಯಲ್ಲಿನ ಗೊಂದಲಗಳನ್ನು ನಿವಾರಿಸುವ ಬದಲು ರಾಜ್ಯ ಶಿಕ್ಷಣ ನೀತಿಯ ಅನುಷ್ಠಾನದ ಆರಂಭದಲ್ಲೇ ಗೊಂದಲಗಳನ್ನು ಸೃಷ್ಟಿ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ತಕ್ಷಣ ಸಮಗ್ರ ಪರಿಶೀಲನೆ ಮಾಡಬೇಕು. ಗೊಂದಲ ನಿವಾರಿಸಬೇಕು’ ಎಂದು ಕೋರಿದ್ದಾರೆ.

ADVERTISEMENT

ಇದಕ್ಕೂ ಮೊದಲು, ‘ಕೆಲವು ವಿಶ್ವವಿದ್ಯಾಲಯಗಳು ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ವಾರಕ್ಕೆ ಮೂರು ಗಂಟೆ ಬೋಧನಾ ಅವಧಿ ನಿಗದಿ ಮಾಡಿರುವುದು ಅನ್ಯಾಯ’ ಎಂದು ಬರಗೂರು ರಾಮಚಂದ್ರಪ್ಪ ಪತ್ರ ಬರೆದಿದ್ದರು. ಅದಕ್ಕೆ ಸ್ಪಂದಿಸಿದ್ದ ಉನ್ನತ ಶಿಕ್ಷಣ ಸಚಿವರು, ನಾಲ್ಕು ಗಂಟೆ ಬೋಧನಾ ಅವಧಿ ನಿಗದಿ ಮಾಡುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.