ADVERTISEMENT

ಪ್ರಾದೇಶಿಕ ಅಸಮತೋಲನ: ಸಿಸಿಡಿಐ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:10 IST
Last Updated 11 ಸೆಪ್ಟೆಂಬರ್ 2024, 15:10 IST
ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಅಧ್ಯಕ ಪ್ರೊ. ಆರ್. ಗೋವಿಂದ ರಾವ್ ಅವರನ್ನು ಯೋಜನಾ ಇಲಾಖೆಯ ಪ್ರದೇಶಾಭಿವೃದ್ದಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ ಬರಮಾಡಿಕೊಂಡರು. ಯೋಜನಾ ಇಲಾಖೆಯ ಸಿಬ್ಬಂದಿ ಜೊತೆಗೆ ಇದ್ದರು
ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಅಧ್ಯಕ ಪ್ರೊ. ಆರ್. ಗೋವಿಂದ ರಾವ್ ಅವರನ್ನು ಯೋಜನಾ ಇಲಾಖೆಯ ಪ್ರದೇಶಾಭಿವೃದ್ದಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ ಬರಮಾಡಿಕೊಂಡರು. ಯೋಜನಾ ಇಲಾಖೆಯ ಸಿಬ್ಬಂದಿ ಜೊತೆಗೆ ಇದ್ದರು   

ಬೆಂಗಳೂರು: ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಆಧಾರದಲ್ಲಿ ಎಲ್ಲ ತಾಲ್ಲೂಕುಗಳ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ‘ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ’ (ಸಿಸಿಡಿಐ) ಗುರುತಿಸಲು ರಾಜ್ಯ ಸರ್ಕಾರ ರಚಿಸಿರುವ ಆರ್ಥಿಕ ತಜ್ಞ ಪ್ರೊ. ಆರ್. ಗೋವಿಂದ ರಾವ್ ಅಧ್ಯಕ್ಷತೆಯ ‘ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ’ ಕೆಲಸ ಆರಂಭಿಸಿದೆ.

ಈ ಸಮಿತಿಗೆ ಸೂರ್ಯನಾರಾಯಣ ಹಿಲ್ಲೆಮನೆ, ಚಿಕ್ಕಮಗಳೂರಿನ ಎ.ಆರ್.‌ ವಾಸವಿ, ಕಲಬುರಗಿಯ ವಾಸುದೇವ ಸೇಡಂ ಧಾರವಾಡದ ಎಸ್.ಜಿ. ಬಾಗಲಕೋಟೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಡಿ.ಎಂ. ನಂಜುಂಡಪ್ಪ ವರದಿಯು ಸುಮಾರು 22 ವರ್ಷಗಳಷ್ಟು ಹಳೆಯದು. ಆಗ ರಾಜ್ಯದಲ್ಲಿ 175 ತಾಲ್ಲೂಕುಗಳಿದ್ದವು. ಪ್ರಸ್ತುತ 240 ತಾಲ್ಲೂಕುಗಳಿವೆ. ಈ ತಾಲ್ಲೂಕುಗಳ ಅಭಿವೃದ್ಧೊ ಹಂತವನ್ನು ಪರಿಶೀಲಿಸಿ ಹೊಸದಾಗಿ ಸಿಸಿಡಿಐ ಗುರುತಿಸುವ ಹೊಣೆಯನ್ನು ಈ ಸಮಿತಿಗೆ ನೀಡಲಾಗಿದೆ.

ADVERTISEMENT

ಏಳನೇ ವೇತನ ಆಯೋಗ ಕಾರ್ಯನಿರ್ವಹಿಸುತ್ತಿದ್ದ ಅರಮನೆ ರಸ್ತೆಯಲ್ಲಿ ಔಷಧಿ ನಿಯಂತ್ರಕರ ಕಚೇರಿಯ ಮೂರನೇ ಮಹಡಿಯಲ್ಲಿ ಸಮಿತಿಯ ಕಚೇರಿ ಉದ್ಘಾಟನೆ ಬುಧವಾರ ನಡೆಯಿತು. ಯೋಜನಾ ಇಲಾಖೆಯ ಪ್ರದೇಶಾಭಿವೃದ್ದಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ ಇದ್ದರು.

ನಂಜುಂಡಪ್ಪ ವರದಿ ಆಧರಿಸಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ₹61,330 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಚಳಿಗಾಲದ ಅಧಿವೇಶನದಲ್ಲಿ ಸದನಕ್ಕೆ ತಿಳಿಸಿದ್ದರು. ಅದೇ ಸಂದರ್ಭದಲ್ಲಿ, ನಂಜುಂಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ಉನ್ನತ ಸಮಿತಿ ರಚಿಸುವುದಾಗಿ ಅವರು ಘೋಷಿಸಿದ್ದರು. ಅದರ ಮುಂದುವರಿದ ಭಾಗವಾಗಿ ಹೊಸ ಸಮಿತಿ ರಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.