ಬೆಂಗಳೂರು: ಆಸ್ತಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ, ಕೇವಲ 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ನಾಗರಿಕ ಸ್ನೇಹಿ ಕಾವೇರಿ–2 ತಂತ್ರಾಂಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಗುರುವಾರ ಚಾಲನೆ ನೀಡಿದರು.
ಕಲಬುರಗಿಯ ಚಿಂಚೋಳಿ, ಬೆಳಗಾವಿ ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈಗಾಗಲೇ ಆರಂಭವಾಗಿರುವ ಸೇವೆ, ದೇವನಹಳ್ಳಿ, ರಾಮನಗರ ಸೇರಿದಂತೆ ಇನ್ನೂ ಕೆಲ ಕಚೇರಿಗಳಲ್ಲಿ ಇದೇ ತಿಂಗಳು ಸೇವೆ ಲಭ್ಯವಾಗಲಿದೆ. ಮೂರು ತಿಂಗಳ ಒಳಗೆ ರಾಜ್ಯದ ಎಲ್ಲೆಡೆ ಜಾರಿಗೊಳಿಸಲಾಗುವುದು ಎಂದು ಅಶೋಕ್ ಹೇಳಿದರು.
ನಾಗರಿಕರು ಎಲ್ಲ ದಾಖಲೆಗಳನ್ನು ಮನೆಯಲ್ಲೇ ಕುಳಿತು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬಹುದು. ಶುಲ್ಕವನ್ನು ಲೆಕ್ಕ ಹಾಕಿಕೊಳ್ಳಬಹುದು. ಪ್ರತಿ ಹಂತದಲ್ಲೂ ಮೊಬೈಲ್ ಸಂದೇಶ ರವಾನಿಸಲಾಗುತ್ತದೆ. ಉಪ ನೋಂದಣಾಧಿಕಾರಿಯು ಆನ್‌ಲೈನ್‌ನಲ್ಲೇ ದಾಖಲೆಗಳನ್ನು ಪರಿಶೀಲಿಸಿದ ನಂತರ ತಮಗೆ ಅನುಕೂಲವಾಗುವ ನೋಂದಣಿ ದಿನ, ಸಮಯವನ್ನು ಜನರು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲೇ ಚಲನ್ ಪಡೆದು, ಹಣ ಪಾವತಿಸಬಹುದು. ಕಚೇರಿಗೆ ಭೇಟಿ ನೀಡಿದ 10 ನಿಮಿಷದೊಳಗೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.
ಪ್ರತಿ ಹಂತದ ಅಧಿಕಾರಿ, ಸಿಬ್ಬಂದಿಗೂ ಜವಾಬ್ದಾರಿ ನಿಗದಿ ಮಾಡಲಾಗಿದ್ದು, ತಪ್ಪಿತಸ್ಥರನ್ನು ಸುಲಭವಾಗಿ ಗುರುತಿಸಿ ಹೊಣೆಗಾರರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ದತ್ತಾಂಶಗಳ ಸುರಕ್ಷತೆಗೆ ಒತ್ತು ನೀಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯ ಜತೆಗೆ, ಜಿಲ್ಲಾ, ಕೇಂದ್ರ ಕಚೇರಿಗಳ ಕಾರ್ಯವಿಧಾನಗಳೂ ಸುಗಮವಾಗಲಿವೆ ಎಂದರು.
ಸಹಾಯವಾಣಿ ಆರಂಭ: ಋಣಭಾರ ಪ್ರಮಾಣಪತ್ರ ಮತ್ತು ದೃಢೀಕೃತ ನಕಲುಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು. ನೋಂದಣಿ ದತ್ತಾಂಶಗಳನ್ನು ರಾಜ್ಯ ದತ್ತಾಂಶ ಕೋಶದಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಹಾಗಾಗಿ, ಸರ್ವರ್ ಸಮಸ್ಯೆಗೆ ಶಾಶ್ವತ
ಪರಿಹಾರ ದೊರಕಲಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳಿದ್ದರೆ ದೂರು ದಾಖಲಿಸಲು ಸಹಾಯವಾಣಿ 080 68265316 ಆರಂಭಿಸಲಾಗಿದೆ ಎಂದುನೋಂದಣಿ ಮಹಾ ಪರಿವೀಕ್ಷಕಿ ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.