ಬೆಂಗಳೂರು: ಈ ಸಾಲಿನಲ್ಲಿ (2022– 23) ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ ಸಂಗ್ರಹದಲ್ಲಿ ಭಾರಿ ಏರಿಕೆ ಆಗಿದ್ದು, ಏಪ್ರಿಲ್‌ನಿಂದ
ಸೆಪ್ಟೆಂಬರ್ 4 ರವರೆಗೆ ಒಟ್ಟು11,08,129 ದಾಖಲೆ ಪತ್ರಗಳು ನೋಂದಣಿ ಆಗಿದ್ದು, ಇದರಿಂದ ₹6,764 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಸುದ್ದಿಗಾರರಿಗೆ ಸೋಮವಾರ ಈ ವಿಷಯ ತಿಳಿಸಿದ ಅವರು, ಐದು ತಿಂಗಳ ಅವಧಿಗೆ₹5,647.68 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಗುರಿ ಮೀರಿ ₹1,117.03 ಕೋಟಿ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ಹೇಳಿದರು.
ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೇಲೆ ಶೇ 10 ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದೇ ಆದಾಯ ಏರಿಕೆಗೆ ಕಾರಣ. ಶೇ 10 ರಷ್ಟು ರಿಯಾಯಿತಿಯನ್ನು ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಲು ಉದ್ದೇಶಿಸಿದ್ದು, ಸದ್ಯವೇ ಆದೇಶ ಮಾಡಲಾಗುವುದು ಎಂದು ಅಶೋಕ ತಿಳಿಸಿದರು.
2020–21ರಲ್ಲಿ ಕೋವಿಡ್ ಕಾರಣ ದಿಂದ 2020 ರ ಮಾರ್ಚ್ 24 ರಿಂದ ಏಪ್ರಿಲ್ 24 ರವರೆಗೆ ಲಾಕ್‌ಡೌನ್ ನಿಮಿತ್ತ ಎಲ್ಲ ಉಪನೋಂದಣಾಧಿಕಾರಿಗಳ ಕಚೇರಿಗಳನ್ನು ಮುಚ್ಚಲಾಗಿತ್ತು. 2021–22 ರ ಸಾಲಿನಲ್ಲಿ 2021 ರ ಮೇ 10 ರಿಂದ ಜೂನ್ 7 ರವ ರೆಗೆ ಉಪನೋಂದಣಾಧಿಕಾರಿಗಳ ಕಚೇರಿ ಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ನೋಂದಣಿ ಪ್ರಮಾಣ ಕಡಿಮೆ ಆಗಿತ್ತು ಎಂದರು.
ಜಿಲ್ಲಾ ನೋಂದಣಾಧಿಕಾರಿ ಮತ್ತು ಉಪನೋಂದಣಿ ಕಚೇರಿಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. 36 ಕಚೇರಿಗಳಲ್ಲಿ ಶೌಚಾಲಯ, 28 ಕಚೇರಿಗಳಲ್ಲಿ ಕುಡಿಯುವ ನೀರಿನ ಕೊರತೆ, 202 ಕಚೇರಿಗಳಲ್ಲಿ ಲಿಫ್ಟ್ ಕೊರತೆ, 135 ಕಚೇರಿಗಳಲ್ಲಿ ರ್‍ಯಾಂಪ್ ಕೊರತೆ, 2 ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಸನಗಳ ಕೊರತೆ, 58 ಕಚೇರಿಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇದೆ. ಮೂರು ತಿಂಗಳೊಳಗೆ ಈ ಎಲ್ಲ ವ್ಯವಸ್ಥೆ
ಗಳನ್ನೂ ಮಾಡಬೇಕು. ಇಲ್ಲವಾದರೆ ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಉಪನೋಂದಣಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಮುಂದಿನ ಅಧಿವೇಶನದಲ್ಲಿ ಭೂಪರಿವರ್ತನೆ ಸರಳೀಕರಣಗೊಳಿಸುವ ಮಸೂದೆ ಮಂಡಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಅಲೆದಾಟ ಹಾಗೂ ಮಧ್ಯವರ್ತಿಗಳ ಕಾಟದಿಂದ ಮುಕ್ತಿ ಸಿಗಲಿದೆ ಎಂದೂ ತಿಳಿಸಿದೆ.
ಕಾಫಿ ಬೆಳೆಗಾರರಿಗೆ 30 ವರ್ಷಕ್ಕೆ ಭೂಮಿ ಲೀಸ್
ಹಾಸನ, ಚಿಕ್ಕಮಗಳೂರು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಬೆಳೆಗಾರರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದರಿಂದ ರೈತರು ಮತ್ತು ಅಧಿಕಾರಿಗಳ ಮಧ್ಯೆ ನಿರಂತರ ತಿಕ್ಕಾಟ ಮುಂದುವರಿದಿದೆ. ಇದರ ಪರಿಹಾರಕ್ಕಾಗಿ, ರೈತರಿಗೆ 30 ವರ್ಷಕ್ಕೆ ಲೀಸ್ ಆಧಾರದಲ್ಲಿ ಒತ್ತುವರಿ ಭೂಮಿ ನೀಡಲು ಇದೇ ತಿಂಗಳು ನಡೆಯುವ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ಇದರಿಂದ ರೈತರಿಗೂ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಸರ್ಕಾರಕ್ಕೆ ಆದಾಯ ಬರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.