ಬೆಂಗಳೂರು: ‘ತಮ್ಮಜೀವನಚರಿತ್ರೆ ಬರೆಯುವಂತೆ ಉದ್ಯಮಿ ಗೌತಮ್ ಅದಾನಿ ಅವರಿಂದ ನನಗೆ2013ರಲ್ಲಿ ಪ್ರಸ್ತಾವ ಬಂದಿತ್ತು’ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ನೆನಪಿಸಿಕೊಂಡರು.
‘ಗೆಟ್ಟಿಂಗ್ ಟು ನೋ ಗಾಂಧಿ: ಎ ಬಯೊಗ್ರಫರ್ಸ್ ಜರ್ನಿ’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಗಾಂಧಿ ಕುರಿತು ಬರೆಯುತ್ತಿದ್ದೇನೆ. ಆದ್ದರಿಂದ ಈ ಪುಸ್ತಕ ಬರೆಯಲಾಗುವುದಿಲ್ಲ ಎಂದು ಅದಾನಿ ಅವರಿಗೆ ತಿಳಿಸಿದ್ದೆ. ಇದನ್ನು ತಿಳಿದ ನನ್ನ ಸ್ನೇಹಿತರು ಇಂಥ ಅವಕಾಶ ಬಿಟ್ಟು ಕೊಡಬಾರದಿತ್ತು. ಒಂದು ವೇಳೆ ನೀನು ನಿನ್ನ ಆತ್ಮಕಥೆ ಬರೆದುಕೊಳ್ಳುವಾಗ ‘ಫ್ರಂ ಗಾಂಧಿ ಟು ಅದಾನಿ, ಎ ಬಯೊಗ್ರಫರ್ಸ್ ಜರ್ನಿ’ ಎಂದು ಪುಸ್ತಕಕ್ಕೆ ಹೆಸರಿಡಬಹುದಿತ್ತು ಎಂದು ಹೇಳಿದರು’ ಎಂದು ಗುಹಾ ಅವರು ಹೇಳುತ್ತಿದ್ದಂತೆ ಸಭಿಕರು ನಗೆಗಡಲಲ್ಲಿ ತೇಲಿದರು.
‘ಇದೇ ನಗರದ ನಿವೃತ್ತ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗರೊಬ್ಬರು ಅವರ ಜೀವನಚರಿತ್ರೆ ಬರೆದುಕೊಡುವಂತೆ ಕೇಳಿದ್ದರು. ಇದೇ ರೀತಿ ನಗರದಲ್ಲೇ ಇರುವ ಖ್ಯಾತ ವಿಜ್ಞಾನಿಯೊಬ್ಬರೂ ಪ್ರಸ್ತಾವ ಇಟ್ಟಿದ್ದರು’ ಎಂದರು.
‘ವಾಜಪೇಯಿ ಪ್ರಸ್ತಾವವನ್ನು ತಿರಸ್ಕರಿಸಿದ್ದೆ’: ‘ವಾಜಪೇಯಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ, ಅವರ ಸಂಬಂಧಿಕರೊಬ್ಬರು ನನ್ನ ಬಳಿ ವಾಜಪೇಯಿ ಅವರ ಜೀವನಚರಿತ್ರೆ ಬರೆಯುವಂತೆ ಕೇಳಿಕೊಂಡಿದ್ದರು. ಈ ಪುಸ್ತಕಗಳು ಒಳ್ಳೆಯ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಪ್ರಧಾನಿ ಅವರೊಂದಿಗೆ ಫೋಟೊ
ಕೂಡ ತೆಗೆದುಕೊಳ್ಳಬಹುದು ಎಂದಿದ್ದರು. ನಾನು ಈ ಪ್ರಸ್ತಾವವನ್ನು ವಿನಯ
ದಿಂದಲೇ ತಿರಸ್ಕರಿಸಿದ್ದೆ. ನಾನು ಒಬ್ಬ ಸಣ್ಣ ಬರಹಗಾರ. ಪ್ರಧಾನಿ ಅವರಂಥ ವ್ಯಕ್ತಿಗಳ ಬಗ್ಗೆ ಬರೆಯುವಷ್ಟು ದೊಡ್ಡವನಲ್ಲ ಎಂದು ಹೇಳಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.