ಶಿರಸಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಉತ್ತರ ಕನ್ನಡದ ನಡುವಿನ ಸಂಬಂಧ ಮೂರೂವರೆ ದಶಕಗಳ ಹಿಂದಿನದು. ಪಕ್ಷದ ಮುಖಂಡರಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ದೇಶ ಪ್ರಧಾನಿಯಾಗಿದ್ದಾಗಲೂ ಅವರು ಜಿಲ್ಲೆಗೆ ಭೇಟಿ ನೀಡಿದ್ದರು.
ವಿರೋಧ ಪಕ್ಷದ ನಾಯಕರಾಗಿದ್ದಾಗ 1996ರಲ್ಲಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದ ಗಾಯತ್ರಿ ಜಪಯಜ್ಞ ಕಾರ್ಯಕ್ರಮಕ್ಕೆ ಅವರು ಭೇಟಿ ನೀಡಿದ್ದು ಮಾಸದ ನೆನಪು. ಅದು ಪೂರ್ವನಿಗದಿತ ಪಟ್ಟಿಯಲ್ಲಿದ್ದ ಕಾರ್ಯಕ್ರಮವೇನಲ್ಲ. ‘ದಾವಣಗೆರೆ, ಹುಬ್ಬಳ್ಳಿಯಲ್ಲಿ ಅವರ ಸಭೆಯಿತ್ತು. ಅವುಗಳ ನಡುವೆ ಸ್ವರ್ಣವಲ್ಲಿ ಅವರು ಬಂದಿದ್ದು ನಮ್ಮ ಭಾಗ್ಯ. ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಅವರನ್ನು ನಾನು ವಿನಂತಿಸಿಕೊಂಡು, ವಾಜಪೇಯಿ ಅವರನ್ನು ಇಲ್ಲಿಗೆ ಕರೆಯಿಸಿಕೊಳ್ಳಲು ಯಶಸ್ವಿಯಾಗಿದ್ದೆ’ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ.
ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅಟಲ್‌ಜೀ, ‘ಭಾರತದಲ್ಲಿ ಸಂಸತ್ತು ಮತ್ತು ವಿಧಾನ ಮಂಡಳಗಳ ಅಧಿವೇಶನಗಳು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭವಾಗಬೇಕು. ಎಲ್ಲ ದೇಶಗಳ ಸಂಸತ್ತು ಆಯಾ ದೇಶದ ಧಾರ್ಮಿಕ ಮಂತ್ರದೊಂದಿಗೆ ಆರಂಭವಾಗುತ್ತದೆ. ಅದರಂತೆ, ವಿಶ್ವಸಂಸ್ಥೆಯ ಸಭೆ ಕೂಡ ಶಾಂತಿ ಪ್ರಾರ್ಥನೆಯಿಂದ ಶುರುವಾಗುತ್ತದೆ’ ಎಂದು ಪ್ರತಿಪಾದಿಸಿದ್ದ ಅವರು, ‘ನಮ್ಮ ದೇಶದಲ್ಲಿ ಶೋಕ ಸಂದೇಶದೊಂದಿಗೆ ಸಂಸತ್ತು ಮತ್ತು ವಿಧಾನ ಮಂಡಲಗಳು ಆರಂಭವಾಗುತ್ತವೆ’ ಎಂದು ವಿಷಾದಿಸಿದ್ದರು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯರೊಬ್ಬರು ಸ್ಮರಿಸಿಕೊಂಡರು.
‘ಮಠದಲ್ಲಿ ಅವರು ಸುಮಾರು ಒಂದೂವರೆ ತಾಸು ಸಮಯ ಕಳೆದಿದ್ದರು. ತಾವು ಗಾಯತ್ರಿ ಬಳಗದಲ್ಲಿರುವುದಾಗಿ ಸ್ವಾಮೀಜಿ ಬಳಿ ಹೇಳಿಕೊಂಡಿದ್ದರು. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ಗಾಯತ್ರಿ ಮಂತ್ರ ಮಹತ್ವ ಕುರಿತ ಕಾರ್ಯಕ್ರಮಗಳ ಬಗ್ಗೆಯೂ ತಿಳಿಸಿದ್ದರು’ ಎಂಬುದನ್ನು ಅನಂತ ಅಶೀಸರ ನೆನಪಿಸಿಕೊಂಡರು.
‘ಪಕ್ಷದ ಅನೇಕ ಸಮಾವೇಶ, ಕಾರ್ಯಕಾರಿಣಿ ಸಭೆಗಳಲ್ಲಿ ಅವರನ್ನು ಭೇಟಿ ಮಾಡಿದ್ದೆ. ಪಕ್ಷ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ, ನಂತರ ಶಾಸಕನಾಗಿ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ವಾಜಪೇಯಿ ಮತ್ತು ಅಡ್ವಾಣಿ, ರಾಮ–ಲಕ್ಷ್ಮಣರಂತೆ ಪಕ್ಷ ಕಟ್ಟಲು ಶ್ರಮಿಸಿದವರು. ಅವರ ಸಂಘಟನಾ ಚಾತುರ್ಯ, ವಿದ್ವತ್ತು, ವಿಶಾಲ ದೃಷ್ಟಿಕೋನ, ರಾಷ್ಟ್ರೀಯತೆಯ ಬದ್ಧತೆ ಮಾರ್ಗದರ್ಶಿಯಂತಿತ್ತು. ಅವರು ಸಮರ್ಥ ಆಡಳಿತದ ಮೂಲಕವೇ ಅವರ ವ್ಯಕ್ತಿತ್ವವನ್ನು ದೇಶಕ್ಕೆ ಮಾತ್ರವಲ್ಲ, ಜಗತ್ತಿಗೆ ಪರಿಚಯಿಸಿದ್ದರು. ಅವರು ಈಗ ನಮ್ಮ ಜೊತೆಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ’ ಎಂದು ಕಾಗೇರಿ ‘ಪ್ರಜಾವಾಣಿ’ ಜೊತೆ ತಮ್ಮ ಅನುಭವ ಹಂಚಿಕೊಂಡರು.
ಹಲವಾರು ಭೇಟಿ:
‘1981 ಹಾಗೂ 1983ರಲ್ಲಿ ಅವರು ಪಕ್ಷ ಸಂಘಟನೆಯ ಕಾರಣಕ್ಕೆ ಶಿರಸಿಗೆ ಭೇಟಿ ನೀಡಿದ್ದರು. 1982ರಲ್ಲಿ ಪಕ್ಷದ ಕಾರ್ಯಕರ್ತರೆಲ್ಲ ಸೇರಿ ಅವರಿಗೆ ಹಮ್ಮಿಣಿ ಅರ್ಪಿಸಿದ್ದರು’ ಎಂಬುದನ್ನು ಬಿಜೆಪಿ ಕಾರ್ಯಕರ್ತ ವಿನಾಯಕ ಹೆಗಡೆ ಶೀಗೆಹಳ್ಳಿ ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.