ಬೆಂಗಳೂರು: ರೈಲುಗಳಲ್ಲಿ ಕಾಯ್ದಿರಿಸದ ಆಸನಗಳಿಗೆ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇ–ಟಿಕೆಟ್ ಖರೀದಿಸಲು ವಿಧಿಸಿದ್ದ ದೂರದ ನಿರ್ಬಂಧವನ್ನು ರೈಲ್ವೆ ಇಲಾಖೆ ಸಡಿಲಿಸಿದೆ.
ಹಿಂದೆ ಉಪನಗರದ ನಿಲ್ದಾಣಗಳಾದರೆ 20 ಕಿ.ಮೀ. ವರೆಗೆ ಹಾಗೂ ಉಪನಗರವಲ್ಲದ ನಿಲ್ದಾಣಗಳಾದರೆ 50 ಕಿ.ಮೀ. ದೂರದವರೆಗೆ ಮಾತ್ರ ಪ್ರಯಾಣಿಸಲು ಯುಟಿಎಸ್ (ಅನ್‌ರಿಸರ್ವ್‌ಡ್ ಟಿಕೆಟಿಂಗ್ ಸಿಸ್ಟಂ) ಮೊಬೈಲ್ ಅಪ್ಲಿಕೇಶನ್‌ನಲ್ಲಿ ಟಿಕೆಟ್ ಖರೀದಿಸಬಹುದಿತ್ತು. ಈಗ ದೂರದ ನಿರ್ಬಂಧ ಮತ್ತು ಭೌಗೋಳಿಕ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ಯಾವುದೇ ಊರಿಗೆ ಹೋಗುವುದಿದ್ದರೂ ಇ–ಟಿಕೆಟ್ ಖರೀದಿಸಲು ಅವಕಾಶ ಸಿಕ್ಕಿದಂತಾಗಿದೆ.
ರೈಲು ನಿಲ್ದಾಣದ ಒಳಗೆ ಅವಕಾಶವಿಲ್ಲ: ರೈಲು ಹತ್ತಿದ ಬಳಿಕ ಇ–ಟಿಕೆಟ್ ಖರೀದಿಸುವ ಮೂಲಕ ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಇರುವ ನಿರ್ಬಂಧ ಮಾತ್ರ ಮುಂದುವರಿಸಲಾಗಿದೆ. ರೈಲಿನಲ್ಲಿ ಅಥವಾ ರೈಲು ನಿಲ್ದಾಣದ ಆವರಣದಲ್ಲಿ ಇರುವಾಗ ಇ–ಟಿಕೆಟ್ ಖರೀದಿಗೆ ಅವಕಾಶ ನೀಡಿಲ್ಲ. ರೈಲು ನಿಲ್ದಾಣದಿಂದ ಕನಿಷ್ಠ ಐದು ಮೀಟರ್‌ಗಿಂತ ಹೊರಗೆ ಇರಬೇಕು. ಗರಿಷ್ಠ ಎಷ್ಟು ದೂರದಲ್ಲಿದ್ದರೂ ಇ–ಟಿಕೆಟ್ ಖರೀದಿ ಮಾಡಬಹುದು. ಆದರೆ, ಟಿಕೆಟ್ ಖರೀದಿಸಿದ ಒಂದು ಗಂಟೆಯ ಒಳಗೆ ರೈಲು ಪ್ರಯಾಣ ಪ್ರಾರಂಭಿಸಬೇಕು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ತ್ರಿನೇತ್ರ ಕೆ.ಆರ್. ತಿಳಿಸಿದ್ದಾರೆ.
ಕಾಯ್ದಿರಿಸದ, ಕಾಗದರಹಿತ ಟಿಕೆಟ್‌ಗಳನ್ನು, ಪ್ಲಾಟ್‌ಫಾರ್ಮ್ ಅಥವಾ ಸೀಸನಲ್ ಟಿಕೆಟ್‌ಗಳನ್ನು ಖರೀದಿಸಲು ದೂರದ ಮಿತಿ ಮತ್ತು ಪ್ರಯಾಣದ ದೂರದ ನಿರ್ಬಂಧಗಳನ್ನು ತೆಗೆದು ಹಾಕಿರುವುದರಿಂದ ರೈಲು ಬಳಕೆದಾರರಿಗೆ ಅನುಕೂಲವಾಗಿದೆ. ಯುಟಿಎಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಟಿಕೆಟ್ ಖರೀದಿಸಿದವರಿಗೆ ಶೇ 3ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.