ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತವರು ರಾಜ್ಯ ಗುಜರಾತ್ ಬಗ್ಗೆ ಎಲ್ಲಿಲ್ಲದ ಒಲವು. ಹಾಗಾಗಿ ಪ್ರಮುಖ ಯೋಜನೆಗಳ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಅನುದಾನದ ವಿಚಾರದಲ್ಲಿ ಧ್ವನಿ ಎತ್ತದ ರಾಜ್ಯ ಬಿಜೆಪಿ ಸಂಸದರ ನಡೆಯನ್ನೂ ಪ್ರಶ್ನೆ ಮಾಡಿದ್ದಾರೆ.
'ಸೆಮಿಕಂಡಕ್ಟರ್ ಪ್ಲಾಂಟ್‌ಗಳಿಂದ ಪ್ರಮುಖ ಉತ್ಪಾದನಾ ಕೇಂದ್ರಗಳವರೆಗೆ ಪ್ರಮುಖ ಹೂಡಿಕೆಗಳನ್ನು ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ರಾಜ್ಯಗಳಿಂದ ದೂರವಿಡಲಾಗಿದೆ. ವಿಶೇಷ ಸಬ್ಸಿಡಿಗಳು ಮತ್ತು ಪ್ರೋತ್ಸಾಹ ಧನಗಳನ್ನು ಗುಜರಾತ್‌ಗೆ ಹಸ್ತಾಂತರಿಸಲಾಗಿದೆ. ಇದು ಗುಜರಾತ್ ಬಗ್ಗೆ ಮೋದಿಗೆ ಇರುವ ಒಲವನ್ನು ತೋರಿಸುತ್ತದೆ' ಎಂದು ಸಿಎಂ ಹೇಳಿದ್ದಾರೆ.
ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಹಾಗೂ ಉತ್ಪಾದನಾ ಪರಿಸರ ವ್ಯವಸ್ಥೆಯ ಬಗೆಗಿನ ಈ ನಿರ್ದಾಕ್ಷಿಣ್ಯ ನಿರ್ಲಕ್ಷವನ್ನು ಪ್ರಶ್ನಿಸಲು ಅವರಿಂದ ಆಗುತ್ತಿಲ್ಲ ಎಂದಿದ್ದಾರೆ.
ಬಿಜೆಪಿ ಸಂಸದರ ಮೌನ ರಾಜ್ಯದ ಹಿತಾಸಕ್ತಿಗಳಿಗೆ ಬಗೆದ ದ್ರೋಹ. ಅವರು ಮೌನವನ್ನು ಮುರಿದು, ರಾಜ್ಯದ ಪರವಾಗಿ ಮಾತನಾಡುವ, ಕರ್ನಾಟಕ ಹಾಗೂ ದಕ್ಷಿಣ ಭಾರತಕ್ಕೆ ನ್ಯಾಯಸಮ್ಮತ ಮತ್ತು ಸಮಾನ ಅವಕಾಶವನ್ನು ಕೋರುವ ಸಮಯ ಇದಾಗಿದೆ ಎಂದು ಸಿಎಂ ಹೇಳಿದ್ದಾರೆ.
ಎಲ್ಲಾ ಜಾತಿ, ಧರ್ಮಗಳ ಬಡವರ ಪರವಾಗಿ ಕೆಲಸ ಮಾಡುತ್ತಿರುವ ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟಾರ್ಗೆಟ್ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿ ಅವರು ಈ ದೇಶದ ಜನರಿಗೆ ಮಾಡಿರುವ ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ನನ್ನ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದಾರೆ. ಜನರ ಬೆಂಬಲ ನನ್ನ ಜೊತೆ ಇರುವವರೆಗೆ ಈ ಯಾವುದಕ್ಕೂ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.