ADVERTISEMENT

ಜಾತಿ ನಿಂದನೆ ಆರೋಪ: ಸಚಿವ ಸುಧಾಕರ್‌ ವಿರುದ್ಧದ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ಜಾತಿ ನಿಂದನೆ, ಹಲ್ಲೆ ಸಹಿತ ವಿವಿಧ ಆರೋಪಗಳ ಸಂಬಂಧ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ವಿರುದ್ಧ ಯಲಹಂಕ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ಯಲಹಂಕದ ಕೆಎಚ್‌ಬಿ ಕಾಲೊನಿ ನಿವಾಸಿ ಸುಬ್ಬಮ್ಮ ದೂರಿನ ಆಧಾರದಲ್ಲಿ ಪೊಲೀಸರು ತಮ್ಮ ವಿರುದ್ಧ ಇದೇ 10ರಂದು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸೆವೆನ್ ಹಿಲ್ಸ್ ಡೆವಲಪರ್ಸ್‌ ಆ್ಯಂಡ್ ಟ್ರೇಡರ್ಸ್‌ ನಿರ್ದೇಶಕರೂ ಆಗಿರುವ ಸಚಿವ ಡಿ. ಸುಧಾಕರ್‌ ಹಾಗೂ ಇತರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಆದೇಶ ಮಾಡಿದ್ದಾರೆ.

ADVERTISEMENT

ಅರ್ಜಿ ಸಂಬಂಧ ಯಲಹಂಕ ಠಾಣಾ ಪೊಲೀಸರಿಗೆ ಮತ್ತು ದೂರುದಾರರಾದ ಸುಬ್ಬಮ್ಮಗೆ ತುರ್ತು ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದೆ.

‘ಸೆವೆನ್ ಹಿಲ್ಸ್ ಡೆವಲಪರ್ಸ್‌ ಆ್ಯಂಡ್ ಟ್ರೇಡರ್ಸ್‌ ಡಿ. ಸುಧಾಕರ್, ಜಿ. ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬವರು ನಮ್ಮ ಕುಟುಂಬದವರಿಗೆ ಮೋಸ ಮಾಡಿ ಜಮೀನಿನ ಕ್ರಯಪತ್ರ ಮಾಡಿಕೊಂಡಿದ್ದಾರೆ. ಈ ಕುರಿತ ಪ್ರಕರಣ ನಗರದ ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಹೀಗಿದ್ದರೂ, ಡಿ.ಸುಧಾಕರ್‌ ಮತ್ತವರ 35 ಸಹಚರರು ಬಂದು ನಾವು ನೆಲೆಸಿರುವ ಮನೆಗಳನ್ನು ತೆರವುಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಿದಾಗ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮಗಳ ಮೇಲೆ ಹಲ್ಲೆ ನಡೆಸಿ ನಮ್ಮ ಜಾತಿ ಹೆಸರು ಉಲ್ಲೇಖಿಸಿ ನಿಂದನೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸುಬ್ಬಮ್ಮ ಇದೇ 10ರಂದು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ ಪೊಲೀಸರು ಸುಧಾಕರ್‌ ಮತ್ತು ಇತರೆ ಅರ್ಜಿದಾರರ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯ್ದೆ-1989 ಅಡಿ ಜಾತಿ ನಿಂದನೆ, ಹಲ್ಲೆ, ಅತಿಕ್ರಮ ಪ್ರವೇಶ, ದೌರ್ಜನ್ಯ, ಗಲಭೆ, ಅಕ್ರಮ ಕೂಟ ನಡೆಸಿದ ಆರೋಪಗಳ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು.

ಸಚಿವ ಡಿ.ಸುಧಾಕರ್‌, ಜಿ.ಶ್ರೀನಿವಾಸ್‌, ಭಾಗ್ಯಮ್ಮ ಅವರು ಹೈಕೋರ್ಟ್‌ಗೆ ಈ ಎಫ್‌ಐಆರ್‌ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ಗೆ ತಡೆಯಾಜ್ಜೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದರು.

ದೂರುದಾರಾದ ಸುಬ್ಬಮ್ಮ 2021ರಲ್ಲೇ ಸೆವೆನ್ ಹಿಲ್ಸ್ ಡೆವಲಪರ್ಸ್‌ ಆ್ಯಂಡ್ ಟ್ರೇಡರ್ಸ್‌ ಹೆಸರಿಗೆ ಯಲಹಂಕ ಹೋಬಳಿಯ ಗಾಂಧಿ ನಗರದ ಸರ್ವೇ ನಂ108/1ರಲ್ಲಿನ 1 ಎಕರೆ 33 ಗುಂಟೆ ಜಾಗ ಮಾರಾಟ ಮಾಡಿದ್ದಾರೆ. ಆ ಕುರಿತ ದಾಖಲೆಯೂ ಇದೆ. ಇದರಿಂದ ಈ ವಿವಾದಿತ ಜಮೀನಿನ ಮೇಲೆ ಅವರಿಗೆ ಯಾವುದೇ ಹಕ್ಕು ಇಲ್ಲ. ಆದರೂ ಸುಳ್ಳು ಆರೋಪ ಮಾಡಿ ತಮ್ಮ ವಿರುದ್ಧ ದೂರು ನೀಡಿರುವ ಕಾರಣ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

‘ಸಂಪುಟದಿಂದ ಬಿಜೆಪಿ ಕೈಬಿಟ್ಟಿತ್ತೇ’

ಚಿತ್ರದುರ್ಗ: ‘2008ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವನಾಗಿದ್ದೆ. ಸಂಪುಟ ಸೇರಿದ ಒಂದೇ ತಿಂಗಳಿಗೆ ನನ್ನ ವಿರುದ್ಧ ಸಿಬಿಐ, ಪ್ರಕರಣ ದಾಖಲಿಸಿತ್ತು. ಆಗ ಬಿಜೆಪಿಯವರು ಸಂಪುಟದಿಂದ ನನ್ನನ್ನು ಕೈಬಿಟ್ಟಿದ್ದರೆ’ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಪ್ರಶ್ನಿಸಿದರು.

‘ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ‌. ಸತ್ಯಾಂಶ ತಿಳಿಯದೇ, ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಸ್ನೇಹಿತರ ಜತೆ ಮಾತಾಡಿದ್ದೇನೆ. ರಾಜಕೀಯ ಉದ್ದೇಶಕ್ಕೆ ನನ್ನ ವಿರುದ್ಧ ಮಾತನಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಶುಕ್ರವಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.